ಬೇಲೂರು: ಪ್ರವಾಸಿ ತಾಣ ಹಾಗೂ ಶಿಲ್ಪಕಲೆಗಳ ನಾಡು ಬೇಲೂರು ಚನ್ನಕೇಶವ ದೇಗುಲಕ್ಕೆ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಭೇಟಿ ನೀಡಿದ ಹಿನ್ನಲೆಯಲ್ಲಿ ಇಲ್ಲಿನ ಪೊಲೀಸರು ವಿಶೇಷ ಭದ್ರತೆಯನ್ನು ವ್ಯವಸ್ಥೆ ಮಾಡಿದ್ದು, ದೂರ-ದೂರದಿಂದ ಬಂದ ಪ್ರವಾಸಿಗರು ದೇಗುಲ ವೀಕ್ಷಣೆಗೆ ಕಾಯಬೇಕಾದ ಸ್ಥಿತಿಯಾಗಿತ್ತು.
ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಬೇಲೂರು-ಹಳೇಬೀಡು ದೇಗುಲ ವೀಕ್ಷಣೆ ಹಿನ್ನಲೆಯಲ್ಲಿ ಏ.13 ಸೋಮುವಾರ ಮಧ್ಯಾಹ್ನ 2 ಗಂಟೆಯಿಂದಲೇ ದೇಗುಲಕ್ಕೆ ಬರುವ ಭಕ್ತರು ಮತ್ತು ಪ್ರವಾಸಿಗರಿಗೆ ನಿರ್ಬಂಧ ಹಾಕಲಾಗಿತ್ತು. ಈ ಕಾರಣದಿಂದ ದೇಶದ ನಾನಾ ರಾಜ್ಯದಿಂದ ಬಂದ ಪ್ರವಾಸಿಗರು ಮತ್ತು ರಾಜ್ಯದ ಪ್ರವಾಸಿಗರು ಸುಮಾರು ಸತತ ಮೂರು ಗಂಟೆಗಳ ಕಾಲ ಕಾಯಬೇಕಾಗಿತ್ತು.
ಕೆಲ ಪ್ರವಾಸಿಗರು ಹಳೇಬೀಡಿಗೆ ತೆರಳಲು ಮುಂದಾಗಿದ್ದು, ಅಲ್ಲಿಯೂ ಕೂಡ ಪೊಲೀಸ್ ವಿಶೇಷ ಭದ್ರತೆ ಇರುವ ನಿಟ್ಟಿನಲ್ಲಿ ಬಂದ ದಾರಿಗೆ ಸುಂಕವಿಲ್ಲ ಎಂಬ ಗಾದೆ ಮಾತಿನಂತೆ ದೇಗುಲದ ಮುಂದಿನ ಕಲ್ಲು ಹಾಸಿಗೆ ಮೇಲೆ ಕಳಿತು ಕಾಯಬೇಕಾಗಿತ್ತು. ಮೊದಲೇ ಬಿಸಿಲಿನ ತಾಪದಿಂದ ಪ್ರವಾಸಿಗರು ನೆರಳಿನ ಕಡೆ ಮುಖ ಮಾಡಿದರು. ಇನ್ನು ತಮಿಳುನಾಡು ರಾಜ್ಯಪಾಲರು ಮಧ್ಯಾಹ್ನ 3-30 ಕ್ಕೆ ದೇಗುಲಕ್ಕೆ ಭದ್ರತೆಯೊಂದಿಗೆ ಆಗಮಿಸಿದರು.
ಈ ಸಂದರ್ಭದಲ್ಲಿ ಚನ್ನಕೇಶವ ದೇಗುಲ ಸಮಿತಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ ಮತ್ತು ದೇಗುಲ ಕಾರ್ಯನಿರ್ವಾಹಕ ಅಧಿಕಾರಿ ಯೋಗೀಶ್ ಮತ್ತು ಸದಸ್ಯರು ಹಾಗೇಯೆ ಸಕಲೇಶಪುರ ಉಪ ವಿಭಾಗಾಧಿಕಾರಿ ಶೃತಿ, ಹಾಸನ ಜಿಲ್ಲಾ ಪ್ರವಾಸೋಧ್ಯಮ ಇಲಾಖೆ ಅಧಿಕಾರಿ ತಿಪ್ಪೇಸ್ವಾಮಿ, ಪುರಾತತ್ವ ಇಲಾಖೆ ಅಧಿಕಾರಿ ಗೌತಮ್ ಸೇರಿದಂತೆ ಇನ್ನು ಮುಂತಾದವರು ದೇಗುಲಕ್ಕೆ ಆತ್ಮೀಯವಾಗಿ ಬರಮಾಡಿಕೊಂಡರು.
ದೇಗುಲದ ರಾಜಗೋಪುರವನ್ನು ದಾಟಿದ ರಾಜ್ಯಪಾಲರಿಗೆ ದೇಗುಲದ ಪ್ರಧಾನ ಅರ್ಚಕರಾದ ಶ್ರೀನಿವಾಸಸ್ವಾಮಿ ಭಟ್ಟರ್ ಅವರು ತಂಡ ಪೂರ್ಣಕುಂಭ ಸ್ವಾಗತ ನೀಡಿ, ಚನ್ನಕೇಶವಸ್ವಾಮಿ ಮತ್ತು ಸೌಮ್ಯನಾಯಕಿ ಅಮ್ಮನವರ ದರ್ಶನ ಪಡೆದು, ಇಲ್ಲಿನ ಹೊಯ್ಸಲ ಶಿಲ್ಪಕಲೆಗಳ ಬಗ್ಗೆ ಪ್ರವಾಸೋಧ್ಯಮ ಇಲಾಖೆ ಮಾರ್ಗದರ್ಶಕದಿಂದ ಮಾಹಿತಿ ಪಡೆದು ಹಳೇಬೀಡು ದೇಗುಲ ವೀಕ್ಷಣೆಗೆ ಪೊಲೀಸ್ ಭದ್ರತೆಯಲ್ಲಿ ತೆರಳಿದರು.
ದೇಗುಲ ವೀಕ್ಷಣೆಗೆ ತಮಿಳುನಾಡು ರಾಜ್ಯಪಾಲರು ಬರುತ್ತಾರೆ ಎಂಬ ವಿಷಯ ತಿಳಿಯದೆ ಬಹುತೇಕ ಪ್ರವಾಸಿಗರು ದೇಗುಲ ವೀಕ್ಷಣೆಗೆ ಎಂದೇ ಬಿಸಿಲಿನ ತಾಪದಲ್ಲಿ ಕಾಯಬೇಕಾದ ಸ್ಥಿತಿ ಒದಗಿತ್ತು. ಸುಮಾರು 4-30 ಕ್ಕೆ ಪ್ರವಾಸಿಗರಿಗೆ ದೇಗಲದ ದರ್ಶನ ಭಾಗ್ಯ ದೊರೆತಿದ್ದು, ಪ್ರವಾಸಿಗರು ಮತ್ತು ಭಕ್ತರು ಏಕಕಾಲಕ್ಕೆ ಜಮಾಸಿದ ಚನ್ನಕೇಶವನ ದರ್ಶನ ಮತ್ತು ಶಿಲ್ಪಕಲೆಗಳನ್ನು ವೀಕ್ಷಣೆ ಮಾಡಿದರು. ರಾಜ್ಯಪಾಲರ ಭೇಟಿ ಹಿನ್ನೆಲೆಯಲ್ಲಿ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು ಅದರೂ ರಾಜ್ಯಪಾಲರು ತೆರಳಿದ ಬಳಿಕ ವಾಹನ ದಟ್ಟಣೆಯಿಂದ ಸುಮಾರು ಒಂದು ಗಂಟೆ ಕಾಲ ಟ್ರಾಫಿಕ್ ನಿಂದ ಸವಾರರು ಹರ ಸಾಹಸ ಪಡಬೇಕಾಗಿತ್ತು.