ಅಯೋಧ್ಯದಲ್ಲಿ ನಡೆಯುವ ಪ್ರತಿಷ್ಟಿತ “ಅಯೋಧ್ಯ” ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ “ತಾರಿಣಿ” ಚಿತ್ರ ಸ್ಪರ್ಧಾತ್ಮಕ ವಿಭಾಗದಲ್ಲಿ ಪ್ರದರ್ಶನಗೊಂಡು “ಅತ್ಯುತ್ತಮ ಸಾಮಾಜಿಕ ಚಿತ್ರ” ಪ್ರಶಸ್ತಿಗೆ ಭಾಜನವಾಗಿದೆ. ಈಗಾಗಲೇ ಈ ಚಿತ್ರ ಹಲವಾರು ಚಲನಚಿತ್ರೋತ್ಸವಗಳಲ್ಲಿ ಭಾಗವಹಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಶ್ರೀ ಗಜನಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಡಾ. ಸುರೇಶ್ ಕೋಟ್ಯಾನ್ ಚಿತ್ರಾಪು ರವರು ಒಂದು ಪ್ರಮುಖ ಪಾತ್ರದಲ್ಲಿ ಅಭಿನಯಿಸಿ ಬಂಡವಾಳವನ್ನೂ ಹೂಡಿದ್ದಾರೆ. ಕಥೆ, ಚಿತ್ರಕಥೆ , ಸಂಭಾಷಣೆ ಬರೆದು “ಸಿದ್ದು ಪೂರ್ಣಚಂದ್ರ” ರವರು ನಿರ್ದೇಶನ ಮಾಡಿದ್ದಾರೆ.
ಈ ಕಥೆ ಗರ್ಭಿಣಿ ಹೆಂಗಸಿನ ಕಥೆಯಾಧಾರಿತ ಚಿತ್ರವಾಗಿರುವುದರಿಂದ ನಾಯಕಿ “ಮಮತಾ ರಾಹುತ್” ರವರು ಗರ್ಭಿಣಿ ಪಾತ್ರಕ್ಕೆ ನೈಜ ಗರ್ಭಿಣಿಯಾಗೇ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಆಗಷ್ಟೇ ಹುಟ್ಟಿದ ಮಮತಾ ರಾಹುತ್ ರವರ ಮಗುವಿನ ದೃಶ್ಯಗಳೂ ‘ತಾರಿಣಿ’ ಚಿತ್ರದಲ್ಲಿರುವುದು ವಿಶೇಷ ಎಂದು ನಿರ್ದೇಶಕರು ತಿಳಿಸಿದ್ದಾರೆ.
ಈಗಾಗಲೇ “ಲಂಡನ್ ಇಂಡಿಪೆಂಡೆಂಟ್ ಫಿಲ್ಮ್ ಅವಾರ್ಡ್ಸ್” “ಗ್ಲೋಬಲ್ ತಾಜ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್” “ಮೋಕ್ಖೊ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್” “ಇಂಡೋಗ್ಮಾ ಫಿಲ್ಮ್ ಫೆಸ್ಟಿವಲ್” ” ಮುಂಬೈ ಇಂಡಿಪೆಂಡೆಂಟ್ ಫಿಲ್ಮ್ ಫೆಸ್ಟಿವಲ್ ” “ಬಾಲಿವುಡ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್” ನಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಜೊತೆಗೆ “ಆಂದ್ರಪ್ರದೇಶದಲ್ಲಿ ನಡೆಯುವ “ವಿಂಧ್ಯಾ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್” “ರಾಜಸ್ಥಾನ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್” ನಲ್ಲೂ ಈ ಚಿತ್ರ ಆಯ್ಕೆಯಾಗಿ ಮುಂದಿನ ವಾರ ಪ್ರದರ್ಶನಕ್ಕೆ ರೆಡಿಯಾಗಿದೆ.
ಫ್ರಾನ್ಸ್ ನ ‘ಗೋಲ್ಡ್ ಫ್ಲಾಷ್’ ಇಂಟರ್ನ್ಯಾಷನಲ್ ಫೆಸ್ಟಿವಲ್ ನಲ್ಲಿ ಅಫಿಷಿಯಲ್ ಸೆಲೆಕ್ಷನ್ ಆಗಿದೆ. ಉಳಿದಂತೆ ಇನ್ನೂ ಹಲವಾರು ಚಿತ್ರೋತ್ಸವಗಳಿಗೆ ತಾರಿಣಿ ಚಿತ್ರವನ್ನು ಕಳುಹಿಸಲಾಗಿದೆ ಎಲ್ಲಾ ಕಡೆಯಲ್ಲೂ ಪ್ರದರ್ಶನಗೊಂಡು ಪ್ರಶಸ್ತಿ ಗೆಲ್ಲುವ ನಂಬಿಕೆ ಇದೆ ಎಂದು ನಿರ್ದೇಶಕ ಸಿದ್ದು ಪೂರ್ಣಚಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈಗೊಂದು ತಿಂಗಳಿಂದಲೂ ನಮ್ಮ ಕರ್ನಾಟಕದಲ್ಲಿ ‘ಹೆಣ್ಣು ಭ್ರೂಣ ಹತ್ಯೆ’ ಕುರಿತಾದ ವಿಷಯಗಳು ಎಲ್ಲಾಕಡೆ ಪ್ರಚಲಿತವಾಗಿ ಕರುಳ ಬಳ್ಳಿಗೆ ಕೊಳ್ಳಿ ಇಡುವ ಕೆಲಸಗಳು ನಿರಂತರವಾಗಿ ನಡೆದು ಈಗ ಅದು ಬಹಿರಂಗವಾಗಿದ್ದು ಎಲ್ಲರಿಗು ಕೋಪ ಮತ್ತು ಕಣ್ಣೀರು ಬರಿಸುವ ಸುದ್ದಿಯಾಗಿ ಹೊರಹೊಮ್ಮಿತ್ತು. ನಾವು ಇದೇ ವಿಷಯವನ್ನು ಕೇಂದ್ರೀಕರಿಸಿ ಸರ್ಕಾರದ ಮತ್ತು ಸ್ವಸ್ತ ನಾಗರೀಕ ಸಮಾಜದ ಪ್ರತಿನಿಧಿಯಾಗಿ ಭವಿಷ್ಯದ ಹಿತಚಿಂತನೆಯಿಂದ ಈ ಕಥೆಯನ್ನು ಸಿದ್ದಪಡಿಸಿದ್ದೇವೆ, ಖಂಡಿತ ಇದೊಂದು ಉತ್ತಮ ಚಿತ್ರವಾಗಿ ಎಲ್ಲರ ಗಮನಸೆಳೆದು ಯಶಸ್ವಿಯಾಗುತ್ತದೆ. ಇಂತಹ ವಿಭಿನ್ನ ಪ್ರಯತ್ನಕ್ಕೆ ಕನ್ನಡಿಗರು ಯಾವತ್ತೂ ಕೈಜೋಡಿಸುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೆ ಚಿತ್ರತಂಡ.
ನಾಯಕನಾಗಿ “ರೋಹಿತ್” ರವರು ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಿ ಅಭಿನಯಿಸಿದ್ದಾರೆ. ಮುಖ್ಯಪಾತ್ರದಲ್ಲಿ ಭವಾನಿ ಪ್ರಕಾಶ್, ಸುಧಾ ಪ್ರಸನ್ನ, ವಿಜಯಲಕ್ಷ್ಮಿ, ಪ್ರಮಿಳಾ ಸುಬ್ರಹ್ಮಣ್ಯ, ಸನ್ನಿ, ಶೀಬಾ, ದೀಪಿಕಾ ಗೌಡ, ಕವಿತ ಕಂಬಾರ್, ಮಟಿಲ್ಢಾ ಡಿಸೋಜಾ,ತೇಜಸ್ವಿನಿ, ಅರ್ಚನ ಗಾಯಕ್ವಾಡ್, ಮಂಜು ನಂಜನಗೂಡು, ರಘು ಸಮರ್ಥ್, ಪ್ರಿನ್ಸ್ ಜಿತಿನ್ ಕೋಟ್ಯಾನ್, ಬೇಬಿ ರಿಧಿ, ಬೇಬಿ ನಿಶಿತಾ,ಚೈತ್ರ, ಶ್ವೇತ ಮುಂತಾದವರು ಅಭಿನಯಿಸಿದ್ದಾರೆ. ಈ ಚಿತ್ರಕ್ಕೆಅನಂತ್ ಆರ್ಯನ್ ರವರು ಸಂಗೀತ ಸಂಯೋಜಿದರೆ ,ದೀಪಕ್ ರವರು ಸಂಕಲನ ಮಾಡಿದ್ದಾರೆ,ಕಲೆ ಬಸವರಾಜ್ ಆಚಾರ್ಯ, ಡಿ.ಐ ಕೆಲಸವನ್ನು ನಿಖಿಲ್ ಕಾರಿಯಪ್ಪ ನಿರ್ವಹಿಸಿದ್ದಾರೆ.