ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್ ಪಂದ್ಯ ಅಸ್ಸಾಂನ ಗುವಾಹಟಿಯಲ್ಲಿ ನವೆಂಬರ್ ೨೨ ರಿಂದ ನಡೆಯಲಿದೆ. ಅಲ್ಲಿನ ಹವಾಮಾನಕ್ಕೆ ತಕ್ಕಂತೆ ಆ ಪಂದ್ಯದ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದ್ದು ಅಚ್ಚರಿಗೆ ಕಾರಣವಾಗಿದೆ. ಯಾಕೆಂದರೆ ಈ ವೇಳಾಪಟ್ಟಿಯಲ್ಲಿ ಭೋಜನ ವಿರಾಮಕ್ಕಿಂತಲೂ ಮುಂಚಿತವಾಗಿಯೇ ಚಹಾ ವಿರಾಮವನ್ನು
ಅಳವಡಿಸಲಾಗಿದೆ. ಟೆಸ್ಟ್ ಪಂದ್ಯಗಳಲ್ಲಿ ಈ ರೀತಿಯ ಬದಲಾವಣೆಗಳು ಬಹಳ ಅಪರೂಪ. ಅಹರ್ನಿಶಿ ಪಂದ್ಯ ಅಲ್ಲದಿದ್ದರೂ ವೇಳಾಪಟ್ಟಿಯ ಬದಲಾವಣೆ ಪ್ರಕಾರ ಈ ಬದಲಾವಣೆಯನ್ನು ಮಾಡಲಾಗಿದೆ. ಈಶಾನ್ಯ ಭಾರತದಲ್ಲಿ ಸೂರ್ಯ ಬೇಗ ಉದಯಿಸಿ ಬೇಗ ಅಸ್ತಮಿಸುವುದರಿಂದ, ಪಂದ್ಯದ ಮೊದಲ ಸೆಷನ್ ಎಂದಿಗಿಂತ ೩೦ ನಿಮಿಷ ಮುಂಚಿತವಾಗಿ
ಆರಂಭವಾಗಲಿದೆ.
ಈ ಪಂದ್ಯವು ಗುವಾಹಟಿಯ ಬಾರ್ಸಾಪಾರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುವ ಮೊದಲ ಟೆಸ್ಟ್ ಪಂದ್ಯವಾಗಿದೆ. ಈ ಮೈದಾನದಲ್ಲಿ ಇತ್ತೀಚೆಗೆ ಮುಗಿದ ಮಹಿಳಾ ಏಕದಿನ ವಿಶ್ವಕಪ್
ಪಂದ್ಯ ನಡೆದಿತ್ತು. ರಾಜಸ್ಥಾನ್ ರಾಯಲ್ಸ್ ತಂಡ ಇಲ್ಲಿ IPL ೨೦೨೫ ಪಂದ್ಯಗಳನ್ನು ಆಯೋಜಿಸಿತ್ತು. ಗುವಾಹಟಿ ಪಂದ್ಯದ ವೇಳಾಪಟ್ಟಿ ಟಾಸ್ ಬೆಳಗ್ಗೆ ೮:೩೦ಕ್ಕೆ ನಡೆಯಲಿದೆ. ಮೊದಲ
ಸೆಷನ್ ಬೆಳಗ್ಗೆ ೯:೦೦ ರಿಂದ ೧೧:೦೦ ರವರೆಗೆ ನಡೆಯಲಿದೆ. ಬಳಿಕ ೨೦ ನಿಮಿಷಗಳ ಚಹಾ ವಿರಾಮ ಇರಲಿದೆ. ೧೧:೨೦ಕ್ಕೆ ಆಟ ಪುನರಾರಂಭಗೊಂಡು ಮಧ್ಯಾಹ್ನ ೧:೨೦ರವರೆಗೆ ನಡೆಯಲಿದೆ. ೧:೨೦ ರಿಂದ ೨:೦೦ ರವರೆಗೆ ಭೋಜನ ವಿರಾಮ ಇರಲಿದೆ ಇರುತ್ತದೆ. ಅಂತಿಮ ಸೆಷನ್ ಸಂಜೆ ೪:೦೦ ಗಂಟೆಗೆ ಮುಕ್ತಾಯಗೊಳ್ಳಲಿದೆ.
ಟೆಸ್ಟ್ ವಿಶ್ವಚಾಂಪಿಯನ್ ದಕ್ಷಿಣ ಆಫ್ರಿಕಾ ಮತ್ತು ಶುಭಮನ್ ಗಿಲ್ ನೇತೃತ್ವದ ಭಾರತ ತಂಡಗಳ ನಡುವೆ ಎರಡು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಪಂದ್ಯವು ನವೆಂಬರ್ ೧೪ ರಿಂದ ೧೮ ರವರೆಗೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆಯಲಿದೆ. ಇದು ಅತ್ಯಂತ ಸ್ಪರ್ಧಾತ್ಮಕ ಪಿಚ್ ಎಂದು ಪಿಚ್ ಕ್ಯುರೇಟರ್ ತಿಳಿಸಿರುವುದರಿಂದ ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಇದ್ದಾರೆ. ದಕ್ಷಿಣ ಆಫ್ರಿಕಾ ತಂಡವು ೨೦೨೧-೨೨ ರಲ್ಲಿ ತವರಿನಲ್ಲಿ ನಡೆದ ಸರಣಿಯಲ್ಲಿ ೨-೧ ಅಂತರದಿಂದ ‘ಫ್ರೀಡಂ ಟ್ರೋಫಿ’ ಗೆದ್ದುಕೊಂಡಿತ್ತು. ಆದರೆ ೨೦೧೯ ರಲ್ಲಿ ಭಾರತಕ್ಕೆ ಬಂದಿದ್ದಾಗ, ೦-೩ ಅಂತರದಿಂದ ಸರಣಿಯನ್ನು ಸೋತಿತ್ತು.
ವರ್ಣಭೇದ ನೀತಿಯ ಪರಿಣಾಮ ದಕ್ಷಿಣ ಆಫ್ರಿಕಾತಂಡ ಕ್ರಿಕಟ್ ನಿಂದ ಬಹುಕಾಲ ನಿಷೇಧಕ್ಕೊಳಗಾಗಿತ್ತು. ೧೯೯೨ ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳಿದ ನಂತರ, ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಒಟ್ಟು ೧೭ ಟೆಸ್ಟ್ ಸರಣಿಗಳು ನಡೆದಿವೆ. ಇದರಲ್ಲಿ ದಕ್ಷಿಣ ಆಫ್ರಿಕಾ ತಂಡ ೮ ಬಾರಿ ಸರಣಿಗಳನ್ನು ಗೆದ್ದಿದ್ದರೆ, ಭಾರತ ೫ ಸರಣಿಗಳನ್ನು ಗೆದ್ದಿದೆ. ೪
ಸರಣಿಗಳು ಡ್ರಾದಲ್ಲಿ ಅಂತ್ಯಗೊಂಡಿವೆ. ಇನ್ನು ದಕ್ಷಿಣ ಆಫ್ರಿಕಾ ತಮ್ಮ ತವರಿನಲ್ಲಿ ನಡೆದ ಒಂಬತ್ತು ಸರಣಿಗಳಲ್ಲಿ ಏಳನ್ನು ಗೆದ್ದಿದೆ. ೨೦೧೦- ೧೧ ಮತ್ತು ೨೦೨೩-೨೪ ರ ಎರಡು ಸರಣಿಗಳು ಡ್ರಾದಲ್ಲಿ ಅಂತ್ಯಗೊಂಡಿವೆ. ಹೀಗಾಗಿ ಭಾರತ ತಂಡ ಅಲ್ಲಿ ಒಂದೇ ಒಂದು ಸರಣಿಯನ್ನೂ ಗೆದ್ದಿಲ್ಲ. ಅದೇ ಭಾರತ ತಂಡ ತವರಿನಲ್ಲಿ ಹರಿಣಗಳ ವಿರುದ್ಧ ಉತ್ತಮ ದಾಖಲೆ ಹೊಂದಿದೆ. ಎಂಟು ಸರಣಿಗಳಲ್ಲಿ ಐದರಲ್ಲಿ ಗೆಲುವು ಸಾಧಿಸಿದೆ. ದಕ್ಷಿಣ ಆಫ್ರಿಕಾ ೧೯೯೯-೨೦೦೦ ರಲ್ಲಿ ಮಾತ್ರ ಭಾರತದಲ್ಲಿ ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ.



