ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಬೌಲರ್ಗಳು ಭರ್ಜರಿ ಪ್ರದರ್ಶನ ನೀಡಿದ್ದಾರೆ. ಆದರೆ, ಬ್ಯಾಟ್ಸ್ಮನ್ಗಳು ಮುಗ್ಗರಿಸುವ ಮೂಲಕ ಅತ್ಯಂತ ಹೀನಾಯ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ.
ಕೇಪ್ಟೌನ್ನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದ ಮೊದಲ ದಿನದಾಟದಲ್ಲಿ ಪ್ರಥಮ ಇನಿಂಗ್ಸ್ನಲ್ಲಿ ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡವು ಮೊಹಮ್ಮದ್ ಸಿರಾಜ್ (6 ವಿಕೆಟ್ಸ್) ದಾಳಿಗೆ ತತ್ತರಿಸಿತು. ಪರಿಣಾಮ ದಕ್ಷಿಣ ಆಫ್ರಿಕಾ ತಂಡವು ಕೇವಲ 55 ರನ್ಗಳಿಗೆ ಆಲೌಟ್ ಆಗಿದೆ.
ಇದರ ಬೆನ್ನಲ್ಲೇ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ 4 ವಿಕೆಟ್ ಕಳೆದುಕೊಂಡು 153 ರನ್ ಕಲೆಹಾಕಿ ಉತ್ತಮ ಸ್ಥಿತಿಯಲ್ಲಿತ್ತು. ಆದರೆ, ಕೆಎಲ್ ರಾಹುಲ್ ಔಟಾಗುತ್ತಿದ್ದಂತೆ ಟೀಮ್ ಇಂಡಿಯಾ ದಿಢೀರ್ ಕುಸಿತಕ್ಕೊಳಗಾಗಿದೆ. ಪರಿಣಾಮ 11 ಎಸೆತಗಳಲ್ಲಿ ಯಾವುದೇ ರನ್ ಕಲೆಹಾಕದೆ 6 ವಿಕೆಟ್ ಕಳೆದುಕೊಂಡು 153 ರನ್ಗಳಿಗೆ ಆಲೌಟ್ ಆಯಿತು.
ಅಚ್ಚರಿ ಎಂದರೆ ಕೊನೆಯ ನಾಲ್ವರು ಬ್ಯಾಟರ್ಗಳು ಖಾತೆ ತೆರೆಯದೇ ಔಟಾದರೆ, ಒಬ್ಬರು ಶೂನ್ಯದೊಂದಿಗೆ ಅಜೇಯರಾಗಿ ಉಳಿದರು. ಅಂದರೆ ಕೊನೆಯ ಐವರು ಬ್ಯಾಟರ್ಗಳಿಂದ ಯಾವುದೇ ರನ್ ಮೂಡಿ ಬಂದಿರಲಿಲ್ಲ. ಇದಕ್ಕೂ ಮುನ್ನ ಇಬ್ಬರು ದಾಂಡಿಗರು ಶೂನ್ಯಕ್ಕೆ ಔಟಾಗಿದ್ದರು.
ಅಂದರೆ ಟೀಮ್ ಇಂಡಿಯಾ ಇನಿಂಗ್ಸ್ನಲ್ಲಿ 7 ಬ್ಯಾಟರ್ಗಳು ಶೂನ್ಯದೊಂದಿಗೆ ಕಾಣಿಸಿಕೊಂಡಿದ್ದರು. ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ಹಾಗೂ ಮುಕೇಶ್ ಕುಮಾರ್ ಖಾತೆ ತೆರೆಯದೇ ಪೆವಿಲಿಯನ್ಗೆ ಹಿಂತಿರುಗಿದ್ದರು.
ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಮೂಡಿಬಂದ ಅತ್ಯಂತ ಕಳಪೆ ದಾಖಲೆಗಳಲ್ಲಿ ಒಂದು. ಅಂದರೆ 147 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಯಾವುದೇ ತಂಡದ 7 ಬ್ಯಾಟರ್ಗಳು ಸೊನ್ನೆಯೊಂದಿಗೆ ಪೆವಿಲಿಯನ್ಗೆ ಮರಳಿರಲಿಲ್ಲ. ಇದೀಗ 2522 ಟೆಸ್ಟ್ ಪಂದ್ಯಗಳ ಬಳಿಕ ಟೀಮ್ ಇಂಡಿಯಾದ 7 ಬ್ಯಾಟರ್ಗಳು ಸೊನ್ನೆ ಸುತ್ತುವ ಮೂಲಕ ಅತ್ಯಂತ ಕಳಪೆ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.