ಹೊಸಕೋಟೆ: ಮಾ.3ರಿಂದ 6ರವರೆಗೆ ನಡೆಯಲಿರುವ ಪಲ್ಸ್ ಪೋಲಿಯೋ ರಾಷ್ಟ್ರೀಯ ಕಾರ್ಯಕ್ರಮವನ್ನು ತಾಲೂಕಿನಾದ್ಯಂತ ಎಲ್ಲಾ ಇಲಾಖೆಗಳು ಸಕ್ರಿಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ತಹಶೀಲ್ದಾರ್ ವಿಜಯಕುಮಾರ್ ಸೂಚಿಸಿದರು.ಅವರು ಮಿನಿ ವಿಧಾನಸೌಧದ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಹಿಂದಿನಂತೆ ಶೇ.100ರಷ್ಟು ಗುರಿ ಸಾಧಿಸಲು ಎಲ್ಲಾ ಇಲಾಖೆಗಳು ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ತಿಳಿಸಿದರು.
ತಾಲೂಕು ಆರೋಗ್ಯಾಧಿಕಾರಿಗಳಾದ ಡಾ: ಉಮೇಶ್ರವರು ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಅಂಕಿ ಅಂಶಗಳನ್ನು ಸಭೆಗೆ ತಿಳಿಸಿ ಹೊಸಕೋಟೆ ತಾಲೂಕಿನಲ್ಲಿ 0-5 ವರ್ಷದೊಳಗಿನ ಒಟ್ಟು 28,804 ಮಕ್ಕಳಿದ್ದು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಒಂದು ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಾರ್ವಜನಿಕ ಆಸ್ಪತ್ರೆಯನ್ನೊಳಗೊಡಂತೆ ತಾಲೂಕಿನಾದ್ಯಂತ ಒಟ್ಟು 115 ಬೂತ್ಗಳು ಕಾರ್ಯನಿರ್ವಹಿಸಲಿದ್ದು,
ಸದರಿ ಬೂತ್ಗಳಲ್ಲಿ 512 ಆರೋಗ್ಯ ಕಾರ್ಯಕರ್ತರನ್ನು ನಿಯೋಜಿಸಲಾಗುವುದು.ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶಿವಕುಮಾರ್ರವರು ಮಾತನಾಡಿ ಗ್ರಾಮಾಂತರ ಜಿಲ್ಲಾಧಿಕಾರಿಗಳ ಆದೇಶದನ್ವಯ ಇಲಾಖಾವಾರು ಕ್ರಮಗಳ ಬಗ್ಗೆ ಸಭೆಗೆ ತಿಳಿಸಿ ತಹಶೀಲ್ದಾರ್ರವರಿಂದ ಅನುಮೋದನೆ ಪಡೆದರು. ಒಟ್ಟಾರೆ ತಾಲೂಕಿನಾದ್ಯಂತ 512 ಆರೋಗ್ಯ ಕಾರ್ಯಕರ್ತರು, ಶ್ರೀ ಲಕ್ಷ್ಮೀದೇವಿ ನಸಿರ್ಂಗ್ ಕಾಲೇಜಿನಿಂದ ಸುಮಾರು 50 ಜನ ನಸಿರ್ಂಗ್ ವಿದ್ಯಾರ್ಥಿಗಳು,
ಎಂವಿಜೆ ನಸಿರ್ಂಗ್ ಕಾಲೇಜಿನ ಸುಮಾರು 70 ಜನ ನಸಿರ್ಂಗ್ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಯಶಸ್ವಿಯಾಗಿ ಕಾರ್ಯಕ್ರಮ ನಡೆಯಲು ತಾಲೂಕು ಮಟ್ಟದ ಅಧಿಕಾರಿಗಳು ಆರೋಗ್ಯ ಇಲಾಖೆಗೆ ಸಂಪೂರ್ಣ ಸಹಕಾರ ನೀಡುವುದು ಅತ್ಯಂತ ಮಹತ್ವದ ವಿಚಾರವೆಂದು ತಿಳಿಸಿದರು.
ಮಾ.3ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆವಿಗೂ ಎಲ್ಲಾ ಬೂತ್ಗಳಲ್ಲೂ ಲಸಿಕೆ ಹಾಕುವ ಕಾರ್ಯ ನಡೆಯಲಿದ್ದು, ಕಾರ್ಯಕ್ರಮದಲ್ಲಿ 0-5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಪೋಲಿಯೋ ಹನಿ ಹಾಕಿಸಲು ಪೋಷಕರು ಗಮನಹರಿಸಬೇಕು ಎಂದು ಮನವಿ ಮಾಡಿದರು.ಇದೇ ಸಂದರ್ಭದಲ್ಲಿ ತಾಲೂಕು ಸರಕಾರಿ ಆಸ್ಪತ್ರೆ ಮುಂಭಾಗ ಪಲ್ಸ್ ಪೋಲಿಯೋ ಬಗ್ಗೆ ಅರಿವು ಮೂಡಿಸುವ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಲಾಯಿತು.ಈ ಸಂದರ್ಭದಲ್ಲಿ ಆಡಳಿತ ವೈದ್ಯಾಧಿಕಾರಿ ಡಾ: ಸಿ.ಎಸ್.ಸತೀಶ್ಕುಮಾರ್, ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.