ಬೆಂಗಳೂರು: ಬಿಜೆಪಿ ನೇತೃತ್ವ ಎನ್ಡಿಎ ಜತೆಗೆ ಸೇರಿ ಒಗ್ಗಟ್ಟಿನಿಂದ ಚುನಾವಣೆ ಎದುರಿಸಿದ್ದೇವೆ. ನಾವು ಎನ್ಡಿಎ ಜತೆಗೆ ಇರುತ್ತೇವೆ ಎಂದು ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ತೆಲುಗು ದೇಶಂ ಪಕ್ಷದ ಮುಖ್ಯಸ್ಥ ನಾ.ರಾ. ಚಂದ್ರಬಾಬು ನಾಯ್ಡು ಸ್ಪಷ್ಟಪಡಿಸಿದ್ದಾರೆ.
ಆಂಧ್ರಪ್ರದೇಶದ ಉಂಡವಲ್ಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ರಾಜ್ಯದಲ್ಲಿ ನಾವು ಸೇರಿದಂತೆ ಜನ ಸೇನಾ ಪಕ್ಷ ಹಾಗೂ ಬಿಜೆಪಿ ಮೂವರು ಸೇರಿ ಒಗ್ಗಟ್ಟಿನಿಂದ ಚುನಾವಣೆ ಎದುರಿಸಿದ್ದೇವೆ. ಮೂವರು ಸೇರಿ ಆಂಧ್ರದಲ್ಲಿ ಸರ್ಕಾರ ರಚನೆ ಮಾಡುತ್ತೇವೆ. ಇಂದು ನಡೆಯುತ್ತಿರುವ ಎನ್ಡಿಎ ಸಭೆಯಲ್ಲಿ ನಾನು ಮತ್ತು ಪವನ್ ಕಲ್ಯಾಣ ಭಾಗಿಯಾಗುತ್ತೇವೆ ಎಂದು ಹೇಳುವ ಮೂಲಕ ನಿನ್ನೆ ಚುನಾವಣಾ ಫಲಿತಾಂಶ ಹೊರಬಿದ್ದಾಗಿನಿಂದ ಎದುರಾಗಿರುವ ಗೊಂದಲಗಳಿಗೆ ನಾಯ್ಡು ಇಂದು ತೆರೆ ಎಳೆದಿದ್ದಾರೆ.
ಇದಕ್ಕೂ ಮುನ್ನ ಮಾತನಾಡಿ, ಆಂಧ್ರಪ್ರದೇಶದಲ್ಲಿ ಇದುವರೆಗೂ ಸರ್ಕಾರ ನಡೆಸಿದ ವೈಎಸ್ಆರ್ಸಿಪಿ ಮುಖ್ಯಸ್ಥ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದ್ದರು.ಆಂಧ್ರಪ್ರದೇಶದಲ್ಲಿ ಈ ಬಾರಿ ನಡೆದ ಚುನಾವಣೆ ಐತಿಹಾಸಿಕ ಚುನಾವಣೆಯಾಗಿದ್ದು, ಇದು ನಮ್ಮ ಪಾಲಿಗೆ ಐತಿಹಾಸಿಕವಾಗಿದ್ದು, ಸುವರ್ಣ ಅಕ್ಷರಗಳಲ್ಲಿ ಬರೆದಿಡುವ ಚುನಾವಣೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ದೌರ್ಜನ್ಯ, ದಬ್ಬಾಳಿಕೆ ಎಲ್ಲಾ ಕಾಲದಲ್ಲೂ ನಡೆಯಲ್ಲ ಹೇಳಿದ ನಾಯ್ಡು ಅಹಂಕಾರ ಸರ್ವಾಧಿಕಾರಿಯಂತೆ ವರ್ತಿಸಿದವರಿಗೆ ಇದೇ ಗತಿಯಾಗುತ್ತದೆ ಎಂದು ಜಗನ್ ವಿರುದ್ಧ ಕಿಡಿಕಾರಿದ್ದಾರೆ.ಕಳೆದ ಐದು ವರ್ಷಗಳಿಂದ ನಡೆದ ಅಕ್ರಮಗಳಿಂದ ಭಾರಿ ನಷ್ಟವುಂಟಾಗಿದೆ. ಜನತೆಗೆ ಸರಿಯಾದ ತೀರ್ಪು ನೀಡಿದ್ದಾರೆ. ಆಂಧ್ರಪ್ರದೇಶದ ಜನತೆಗೆ ಇದೇ ಸಂದರ್ಭದಲ್ಲಿ ಧನ್ಯವಾದ ತಿಳಿಸಿದ್ದಾರೆ.