ದೆಹಲಿ: ಸಾಲಮನ್ನಾ, ಬೆಳೆದ ಬೆಳೆಗೆ ಸೂಕ್ತ ಬೆಂಬಲ ಬೆಲೆ ನಿಗದಿ ಸೇರಿದಂತೆ ತಮ್ಮ ಹಲವು ಬೇಡಿಕೆಗಳ ಈಡೇರಿಕೆಗಾಗಿ ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ತೆರಳಿದ್ದ ರೈತರಿಗೆ ದಿಗ್ಭಂಧನ ವಿಧಿಸಿ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಒಂದು ತಿಂಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ರೈತರು ದೆಹಲಿಗೆ ಬರುತ್ತಿರುವ ದಾರಿಗಳಲ್ಲಿ ಅಡ್ಡಿಯುಂಟು ಮಾಡಲಾಗುತ್ತಿದೆ. ಬ್ಯಾರಿಕೇಡ್ಗಳನ್ನು ನಿರ್ಮಸಿ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಇದ್ಯಾವುದನ್ನು ಲೆಕ್ಕಿಸದೆ ರೈತರು ದೆಹಲಿಯತ್ತ ತಮ್ಮ ಹೆಜ್ಜೆ ಹಾಕಿದ್ದಾರೆ.
ರೈತರು ಒಂದೇ ಸಮನೇ ನುಗುತ್ತಿರುವುದನ್ನು ತಡೆಯಲು ಪೊಲೀಸರು ಅಶ್ರುವಾಯು ಸಿಡಿಸಿ ಪ್ರತಿಭಟನಾಕಾರರನ್ನು ಚದುರಿಸಲು ಮುಂದದಾಗ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ದೆಹಲಿಯ ಗಡಿ ಭಾಗಗಳಲ್ಲಿ ರೈತರಪರ ಪ್ರತಿಭಟನೆಗೆ ತಡೆಯೊಡ್ಡಲು ರಸ್ತೆ ಬಂದ್ ಮಾಡಲಾಗಿದೆ.
ದೆಹಲಿಯ ಶಂಬು, ಅಂಬಾಲ, ಹರಿಯಾಣದ ಗಡಿಯಲ್ಲಿ ರೈತರಿಗೆ ತಡೆಯೊಡ್ಡಲಾಗಿದೆ. ಹೆದ್ದಾರಿಗಳಲ್ಲಿ ಬರುವುದನ್ನು ಬಿಟ್ಟು ಸರ್ವೀಸ್ ರಸ್ತೆಯಲ್ಲಿ ಬರಲುಮುಂದಾಗಿದ್ದಾರೆ.ಕರ್ನಾಟಕದಿಂದ ತೆರಳುತ್ತಿದ್ದ ರೈತರನ್ನು ನಿನ್ನೆ ಮಧ್ಯಪ್ರದೇಶದ ಭೂಪಾಲ್ನಲ್ಲಿ ವಶಕ್ಕೆ ಪಡೆದಿದ್ದ ಪೊಲೀಸರು ಇಂದು ಮುಂಜಾನೆ ಅವರನ್ನು ಉಜ್ಜಯಿನಿ ಕರೆದೊಯ್ದಿದ್ದಾರೆ.
ಈ ಸಂದರ್ಭದಲ್ಲಿ ಹಲವು ರೈತರಿಗೆ ಗಾಯಗಳಾಗಿವೆ. ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಅವರ ಪತ್ನಿ ಪದ್ಮ ಶಾಂತಕುಮಾರ್ ಅವರ ತಲೆಗೆ ಗಂಭೀರ ಗಾಯವಾಗಿದೆಎಂದು ಹೇಳಲಾಗಿದೆ.