ಹೈದರಾಬಾದ್: ಆಂಧ್ರದ ಕರ್ನೂಲ್ ಬಳಿಯ ಚಿನ್ನಟೇಕೂರು ಬಳಿ ಘನಘೋರ ದುರಂತ ಸಂಭವಿಸಿದೆ. ಹೈದರಾಬಾದ್ನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸು ಹೊತ್ತಿ ಉರಿದು ಕನಿಷ್ಠ ೨೦ಕ್ಕೂ ಹೆಚ್ಚು ಜನ ಸಜೀವ ದಹನವಾಗಿರುವ ಶಂಕೆ ವ್ಯಕ್ತವಾಗಿದೆ. ಕಾವೇರಿ ಹೆಸರಿನ ವೋಲ್ವೋ ಬಸ್ಸಿನಲ್ಲಿ ೪೪ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಶುಕ್ರವಾರ ಬೆಳಗಿನ ಜಾವ ೩ ಗಂಟೆಯ ವೇಳೆಗೆ ವೇಗವಾಗಿ ಬಂದ ಬೈಕ್ ಬಸ್ಸಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ನಂತರ ಬೈಕ್ ಬಸ್ಸಿನ ಕೆಳಗಡೆಯಿಂದ ಮುಂದಕ್ಕೆ ಹೋಗಿ ಇಂಧನ ಟ್ಯಾಂಕ್ಗೆ ಬಡಿದಿದೆ. ಹಿಂಭಾಗದಲ್ಲಿರುವ ಇಂಧನ ಟ್ಯಾಂಕ್ಗೆ ಬೈಕ್ ಡಿಕ್ಕಿ ಬಡಿದ ರಭಸಕ್ಕೆ ಬೆಂಕಿ ಹೊತ್ತಿಕೊಂಡಿದೆ. ಕೆಲವೇ ನಿಮಿಷದಲ್ಲಿ ಬೆಂಕಿ ಇಡೀ ಬಸ್ಸನ್ನು ಆವರಿಸಿದೆ.
ಬಸ್ಸಿನಲ್ಲಿದ್ದ ೧೨ ಮಂದಿ ಪ್ರಯಾಣಿಕರು ಪಾರಾದರೂ ಕನಿಷ್ಠ ೨೦ ಮಂದಿ ಜೀವಂತವಾಗಿ ಸುಟ್ಟು ಹೋಗಿರುವ ಶಂಕೆ ವ್ಯಕ್ತವಾಗಿದೆ. ಪ್ರಯಾಣಿಕರನ್ನು ಕರ್ನೂಲ್ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಪ್ರಯಾಣಿಕರು ಹೈದರಾಬಾದ್ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಕರ್ನೂಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಆದಾಗ್ಯೂ, ಪ್ರದೇಶದಲ್ಲಿ ಸುರಿಯುತ್ತಿದ್ದ ಭಾರೀ ಮಳೆಯಿಂದಾಗಿ ರಕ್ಷಣಾ ಕಾರ್ಯಕ್ಕೆ ತೀವ್ರ ಅಡ್ಡಿಯಾಯಿತು. ಅಪಘಾತದ ನಂತರ ಬಸ್ ಚಾಲಕ ಸೇರಿದಂತೆ ಬಸ್ ಸಿಬ್ಬಂದಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ. ಅಪಘಾತದಿಂದಾಗಿ ಹೆದ್ದಾರಿಯಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗಿ, ವಾಹನಗಳು ಗಂಟೆಗಟ್ಟಲೆ ಸಿಲುಕಿಕೊಂಡವು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಸಿಎಂ ನಾಯ್ಡು ಕಂಬನಿ
ಆAಧ್ರಪ್ರದೇಶ: ಪ್ರಸ್ತುತ ದುಬೈಗೆ ಅಧಿಕೃತ ಭೇಟಿಯಲ್ಲಿರುವ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ದುರಂತದ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದರು. ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದ ನಂತರ, ಅವರು ಮುಖ್ಯ ಕಾರ್ಯದರ್ಶಿಯೊಂದಿಗೆ ಚರ್ಚಿಸಿದರು. ಉನ್ನತ ಆಡಳಿತ ಸಿಬ್ಬಂದಿಗೆ ಅಪಘಾತ ಸ್ಥಳಕ್ಕೆ ಧಾವಿಸಿ ರಕ್ಷಣಾ ಮತ್ತು ಪರಿಹಾರ ಪ್ರಯತ್ನಗಳನ್ನು ನೋಡಿಕೊಳ್ಳಲು ನಿರ್ದೇಶನ ನೀಡಿದ್ದಾರೆ.
ಗಾಯಾಳುಗಳಿಗೆ ಅಗತ್ಯವಿರುವ ಎಲ್ಲಾ ವೈದ್ಯಕೀಯ ನೆರವು ಒದಗಿಸುವಂತೆ ಮತ್ತು ಮೃತರ ಕುಟುಂಬಗಳಿಗೆ ಬೆಂಬಲ ನೀಡಬೇಕೆಂದು ಮುಖ್ಯಮಂತ್ರಿ ಸೂಚನೆ ನೀಡಿದರು. ಹೆಚ್ಚಿನ ಸಾವುನೋವುಗಳನ್ನು ತಡೆಗಟ್ಟಲು ತ್ವರಿತ ಕ್ರಮ ಕೈಗೊಳ್ಳುವ ಅಗತ್ಯವನ್ನು ಹೇಳಿದ್ದು, ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಭರವಸೆ ನೀಡಿದ್ದಾರೆ. ಸಚಿವರಾದ ಬಿ.ಸಿ. ಜನಾರ್ದನ ರೆಡ್ಡಿ ಮತ್ತು ಕೆ. ಅಚ್ಚನ್ನಾಯ್ಡು ಕೂಡ ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿ, ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.



