ಹಾವೇರಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಬದಿ ನಿಂತಿದ್ದ ಲಾರಿಗೆ ಅತಿ ವೇಗವಾಗಿ ಬಂದ ಟಿಟಿ ವಾಹನ ಅಪ್ಪಳಿಸಿ ಭೀಕರ ಅಪಘಾತ ಸಂಭವಿಸಿದೆ. ಈ ಭೀಕರ ಅಪಘಾತದಲ್ಲಿ 13 ಜನರು ಸ್ಥಳದಲ್ಲಿ ದುರ್ಮರಣ ಹೊಂದಿದ್ದಾರೆ. ಮೂವರನ್ನ 108 ಅಂಬುಲೆನ್ಸ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಹಾವೇರಿಯ ಬ್ಯಾಡಗಿ ಸಮೀಪದ ಗುಂಡನ ಹಳ್ಳಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಇಂದುಬೆಳಗಿನ ಜಾವ 3-40ರ ಸುಮಾರಿಗೆ ಈ ಭೀಕರ ರಸ್ತೆ ಅಪಘಾತ ನಡೆದು ಹೋಗಿದೆ. ವಾಹನದಲ್ಲಿದ್ದ ಚಾಲಕ ಸೇರಿ ನಾಲ್ವರು ಪುರುಷರು, ಏಳುಜನ ಮಹಿಳೆಯರು, ಒಂದು ಮಗು, ಓರ್ವ ಅಜ್ಜಿ, ಓರ್ವ ವಿಕಲಚೇತನ ಯುವತಿ ಸೇರಿದ್ದು, ಶವಗಳನ್ನು ಇಲ್ಲಿನ ಜಿಲ್ಲಾ ಆಸ್ಪತ್ರೆ ಗೆ ಸಾಗಿಸಲಾಗಿದೆ.
ಅಪಘಾತ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ 108ರ ವಾಹನದ ಸ್ಟಾಪ್ ನರ್ಸ್ಗಳಾದ ಶಂಕರ್ ಲಮಾಣಿ, ತೋಷಿಪ್ ಪಠಾಣ. ಚಾಲಕರು ಟಿಟಿ ವಾಹನದಲ್ಲಿ ಸಿಲುಕಿದ್ದ ಮೂವರನ್ನು ರಕ್ಷಣೆ ಮಾಡಿ ಅವರಿಗೆ ಚಿಕಿತ್ಸೆ ನೀಡಿ ಜಿಲ್ಲಾ ಆಸ್ಪತ್ರೆ ಗೆ ದಾಖಲಿಸಿದ್ದಾರೆ.ಈ ಮೂವರು ತೀವ್ರವಾಗಿ ಗಾಯಗೊಂಡಿದ್ದು ಇವರನ್ನು ಚಿಕಿತ್ಸೆಗಾಗಿ ಇಲ್ಲಿನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಟಿಟಿ ವಾಹನ ಹಿಂಬದಿಯಿಂದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.ಬೆಳಗಾವಿ ಜಿಲ್ಲೆಯಲ್ಲಿ ಇರುವ ದೇವಿ ದರ್ಶನ ಮುಗಿಸಿ ವಾಪಸ್ ಹೋಗುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಈ ಟಿಟಿ ವಾಹನ ಕಳೆದ ಒಂದುವರೆ ತಿಂಗಳ ಹಿಂದೆ ಹೊಸದಾಗಿ ಖರೀದಿ ಮಾಡಿದ್ದು ಕುಟುಂಬ ಸಮೇತ ಪೂಜೆಗೆ ಹೋಗಿದ್ದಾರೆ.
ಪರಶುರಾಮ್, ಭಾಗ್ಯ, ನಾಗೇಶ್, ವಿಶಾಲಾಕ್ಷಿ, ಅರ್ಪಿತಾ, ಸುಭದ್ರಾ ಬಾಯಿ, ಪುಣ್ಯ, ಮಂಜುಳಾ ಬಾಯಿ, ಆದರ್ಶ ಮಾನಸ, ರೂಪ, ಮಂಜುಳಾ ಎಂದು ಗುರುತಿಸಲಾಗಿದೆ. ಮೃತರೆಲ್ಲರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆ ಹೊನ್ನೂರು ಬಳಿಯ ಎಮ್ಮಿಹಟ್ಟಿ ಗ್ರಾಮದವರು ಎಂದು ತಿಳಿದುಬಂದಿದ್ದು, ಸದ್ಯ ಹದಿಮೂರು ಜನರ ಸಾವು ದೃಢವಾಗಿದೆ. ಇನ್ನೂ ಮೂವರ ಸ್ಥಿತಿ ಗಂಭೀರವಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಈ ದುರ್ಘಟನೆಯಲ್ಲಿ ಸಣ್ಣ ಸಣ್ಣ ಮಕ್ಕಳು ಕೂಡ ಮೃತಪಟ್ಟಿದ್ದಾರೆ. ತಾಯಿಯ ಎದುರೆ ಅವಳಿ ಮಕ್ಕಳ ಸಾವು ಕಂಡು ಆಂಬ್ಯುಲೆನ್ಸ್ ಸಿಬ್ಬಂದಿ ಕಣ್ಣೀರು ಹಾಕಿದ್ದಾರೆ.
ಓರ್ವ ಬಾಲಕಿ ಮತ್ತು ಅಜ್ಜಿ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಟಿಟಿ ವಾಹನದಲ್ಲಿ 15ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು. ಡಿಕ್ಕಿಯ ರಭಸಕ್ಕೆ ಟಿಟಿ ವಾಹನ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಮೃತದೇಹಗಳು ಅಪ್ಪಚ್ಚಿಯಾಗಿವೆ. ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಹಾವೇರಿ ಜಿಲ್ಲಾ ಆಸ್ಪತ್ರೆಗೆ ಆಗಮಿಸಿದ ಕುಟುಂಬಸ್ಥರ ರೋಧನ ಮುಗಿಲು ಮುಟ್ಟುತ್ತಿದ್ದು ನೋಡಲು ಆಗುತ್ತಿಲ್ಲ.
ರಸ್ತೆ ಪಕ್ಕದಲ್ಲಿ ನಿಲ್ಲಿಸಿದ ಲಾರಿ ಯಾವ ಕಾರಣಕ್ಕೆ ನಿಲ್ಲಿಸಿದ್ದಾರೆ ಎನ್ನುವುದನ್ನು ತನಿಕೆಯಿಂದ ತಿಳಿದುಕೊಳ್ಳಬೇಕಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಪತ್ರಕರ್ತರೊಂದಿಗೆ ಮಾತನಾಡಿ ಮಾಹಿತಿ ನೀಡಿ ತಕ್ಷಣ ಎಲ್ಲರನ್ನ ಜಿಲ್ಲಾ ಆಸ್ಪತ್ರೆಗೆ ರವಾನಿಸಿ, ಅಪಘಾತದಲ್ಲಿ ಸಿಲುಕಿದ ರೋಗಿಗಳಿಗೆ ಆರೈಕೆ ಮಾಡುತ್ತಿದ್ದಾಗಿದೆ ಮಾಹಿತಿ ನೀಡಿದರು.ಈ ಕುರಿತು ಹಾವೇರಿ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.