ಇಂಡಿಯನ್ ಪ್ರೀಮಿಯರ್ ಲೀಗ್ 17ರ ಮೊದಲೆರಡು ಪಂದ್ಯಗಳಲ್ಲಿ ಸೋಲನುಭವಿಸಿರುವ ಮುಂಬೈ ಇಂಡಿಯನ್ಸ್ ತಂಡವು ಇದೀಗ ಮೂರನೇ ಪಂದ್ಯಕ್ಕಾಗಿ ಸಜ್ಜಾಗಿ ನಿಂತಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಸೋಮವಾರ (ಏ.1) ನಡೆಯಲಿರುವ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ.
ಆದರೆ ಈ ಪಂದ್ಯವು ಹಾರ್ದಿಕ್ ಪಾಂಡ್ಯ ಪಾಲಿಗೆ ಅಗ್ನಿಪರೀಕ್ಷೆಯಾಗಿ ಮಾರ್ಪಡುವ ಸಾಧ್ಯತೆಯಿದೆ. ಏಕೆಂದರೆ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಇದೇ ಮೊದಲ ಬಾರಿಗೆ ವಾಂಖೆಡೆ ಸ್ಟೇಡಿಯಂನಲ್ಲಿ ಕಣಕ್ಕಿಳಿಯುತ್ತಿದೆ. ಇದಕ್ಕೂ ಮುನ್ನ ಮುಂಬೈ ಅಹಮದಾಬಾದ್ ಮತ್ತು ಹೈದರಾಬಾದ್ನಲ್ಲಿ ಪಂದ್ಯಗಳನ್ನಾಡಿತ್ತು. ಈ ಎರಡು ಪಂದ್ಯಗಳ ವೇಳೆ ರೋಹಿತ್ ಶರ್ಮಾ ಅವರ ಅಭಿಮಾನಿಗಳಿಂದ ಹಾರ್ದಿಕ್ ಪಾಂಡ್ಯ ನಿಂದನೆ ಅನುಭವಿಸಿದ್ದರು. ಅದರಲ್ಲೂ ಪಾಂಡ್ಯ ಅವರ ತವರು ಅಹಮದಾಬಾದ್ನಲ್ಲೂ ಮೂದಲಿಸಲಾಗಿತ್ತು.