ಗುಂಡ್ಲುಪೇಟೆ: ಜಿಂಕೆ ಹಾಗೂ ಕಾಡು ನಾಯಿಗೆ ಡಿಕ್ಕಿ ಹೊಡೆದು ಪರಾರಿಯಾಗುತ್ತಿದ್ದ ಇನ್ನೋವಾ ಕಾರನ್ನು ಬೆನ್ನಟ್ಟಿದ ಅರಣ್ಯಾಧಿಕಾರಿಗಳು ವಾಹನ ಸಮೇತ ಆರೋಪಿಯನ್ನು ಬಂಧಿಸಿರುವ ಘಟನೆ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿಯ ಮದ್ದೂರು ಸಮೀಪದಲ್ಲಿ ನಡೆದಿದೆ.
ಕೇರಳದ ವಯನಾಡು ಜಿಲ್ಲೆಯ ಸುಲ್ತಾನ್ ಬತ್ತೇರಿಯ ಸ್ಟೇಪ್ಪನ್ ಸನ್ನಿ ಬಂಧಿತ ಆರೋಪಿ. ಈತ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಮದ್ದೂರು ವಲಯದ ಹೆದ್ದಾರಿ ರಸ್ತೆಯಲ್ಲಿ ಗುಂಡ್ಲುಪೇಟೆಯಿಂದ ತನ್ನ ಇನೋವಾ ಕಾರು(ಕೆ.ಎಲ್-58 ಎಎಫ್-0331)ನಲ್ಲಿ ಕೇರಳ ಕಡೆ ವೇಗವಾಗಿ ಚಲಿಸಿದ್ದ ವೇಳೆ 5 ವರ್ಷದ ಕಾಡು ನಾಯಿ(ಡೋಲ್) ಹಾಗೂ 3 ವರ್ಷದ ಜಿಂಕೆಗೆ ಡಿಕ್ಕಿ ಹೊಡೆದಿದ್ದಾನೆ.
ಡಿಕ್ಕಿಹೊಡೆದ ರಭಸಕ್ಕೆ ಸ್ಥಳದಲ್ಲೇ ಸಾವನ್ನಪ್ಪಿವೆ. ಇದರಿಂದ ಭಯಭೀತನಾದ ಕಾರು ಚಾಲಕ ಪರಾರಿಯಾಗಲು ಯತ್ನಿಸಿದ್ದಾರೆ. ತಕ್ಷಣ ಕಾರ್ಯ ಪ್ರೌವೃತ್ತರಾದ ಉಪ ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿ ಇನ್ನೋವಾ ಕಾರನ್ನು ಬೆನ್ನಟ್ಟಿ ಚಾಲಕನನ್ನು ಕಾರು ಸಮೇತ ಹಿಡಿದು ಬಂಧಿಸಿದ್ದಾರೆ.ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಎಸ್.ಪ್ರಭಾಕರನ್ ಮಾರ್ಗದರ್ಶನದಂತೆ ಗುಂಡ್ಲುಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ರವೀಂದ್ರ ಬಂಧಿತ ಆರೋಪಿಯ ವಿಚಾರಣೆ ನಡೆಸಿದರು.
ನಂತರ ಮೃತ ಕಾಡು ನಾಯಿ ಹಾಗೂ ಜಿಂಕೆಯ ಕಳೆಬರವನ್ನು ಇಲಾಖಾ ಪಶು ವೈದ್ಯಾಧಿಕಾರಿಗಳಿಂದ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ, ತದನಂತರ ಅರಣ್ಯ ಪ್ರದೇಶದಲ್ಲಿ ಪ್ರಕೃತಿಗೆ ಬಿಡಲಾಯಿತು. ಹಾಗೂ ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಈ ಸಂದರ್ಭದಲ್ಲಿ ಮದ್ದೂರು ವಲಯ ಅರಣ್ಯಾಧಿಕಾರಿ ಬಿ.ಎಂ.ಮಲ್ಲೇಶ್, ಉಪ ವಲಯ ಅರಣ್ಯಾಧಿಕಾರಿ ರವಿಕುಮಾರ್ ಸಂಗೂರ್, ಗಸ್ತು ವನಪಾಲಕರಾದ ಬಾಹುಬಲಿ, ಮಹಮ್ಮದ್ ನಡಾಫ್, ನವೀನ, ಜೀವನ್, ಮನು ಸೇರಿದಂತೆ ಇಲಾಖಾ ಸಿಬ್ಬಂದಿ ವರ್ಗದವರು ಹಾಜರಿದ್ದರು.