ಮಧುಗಿರಿ: ಸುಮಾರು 15 ಸರಗಳ್ಳತನದಲ್ಲಿ ಭಾಗಿಯಾಗಿದ್ದ ಕುಖ್ಯಾತ ಆರೋಪಿಯನ್ನು ಬಂಧಿಸಿ ಕರೆ ತರುವಾಗ ಕೊಡಿಗೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಈಜೀಹಳ್ಳಿ ಬಳಿ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯ ಕಾಲಿಗೆ ಪೊಲೀಸರು ಗುಂಡಿಕ್ಕಿ ವಶಕ್ಕೆ ಪಡೆದಿದ್ದಾರೆ.
ತಾಲ್ಲೂಕಿನ ಹಲವು ಸರಗಳ್ಳತನ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಆಂಧ್ರಪ್ರದೇಶದ ಹಿಂದೂಪುರ ಮೂಲದ ರಿಜ್ವಾನ್ (34) ಎ2 ಆರೋಪಿ ಹೊಸಕೋಟೆ ಬಳಿ ಸೆರೆ ಸಿಕಿದ್ದು ಮಧುಗಿರಿಗೆ ಕರೆತರುವಾಗ ಈಜೀಹಳ್ಳಿ ಕ್ರಾಸ್ ಬಳಿ ಬಹಿರ್ದೆಸೆಗೆ ಹೋಗಲು ಜೀಪ್ನಿಂದ ಇಳಿದಿದ್ದ. ಈ ವೇಳೆ ಸ್ಥಳದಲ್ಲಿ ಬಿದ್ದಿದ್ದ ಬೀರುಬಾಟಲ್ ಚೂರು ತೆಗೆದು ಪೇದೆ ರಮೇಶ್ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿ, ಎಸ್ಕೇಪ್ ಆಗಲು ಯತ್ನಿಸಿದ್ದು, ಕೂಡಲೇ ಆರೋಪಿಯನ್ನು ಶರಣಾಗುವಂತೆ ಮೂರು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದ ಪೊಲೀಸರು ನಂತರ ಆತ್ಮರಕ್ಷಣೆಗಾಗಿ ಕಾಲಿಗೆ ಗುಂಡು ಹೊಡೆದು ಆರೋಪಿಯನ್ನು ಬಂಧಿಸಿದ್ದಾರೆ.
ಗಾಯಾಳು ಪೊಲೀಸ್ ಸಿಬ್ಬಂದಿ ರಮೇಶ್ ಗೆ ಮಧುಗಿರಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮಧುಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 3, ಮಿಡಿಗೇಶಿ ವ್ಯಾಪ್ತಿಯಲ್ಲಿ 4, ಬಡವನಹಳ್ಳಿ 2, ಕೊರಟಗೆರೆ 1, ಕೊಡಿಗೇನಹಳ್ಳಿ 2, ಮಡಕಶಿರಾ 1, ಪಟ್ಟನಾಯಕನಹಳ್ಳಿ 2, ಗೌರಿಬಿದನೂರು 1 ಸೇರಿದಂತೆ ಹಲವು ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ಪ್ರಕರಣಗಳು ದಾಖಲಾಗಿದ್ದವು. ಒಟ್ಟು 15 ಕ್ಕೂ ಹೆಚ್ಚು ಸರಗಳ್ಳತನ ಪ್ರಕರಣಲ್ಲಿ ಭಾಗಿಯಾಗಿದ್ದ ಆರೋಪಿ ರಿಜ್ವಾನ್ ಹೊಸಕೋಟೆಯಲ್ಲಿರುವ ಮಾಹಿತಿಯನ್ನು ಮತ್ತೊಬ್ಬ ಎ1 ಆರೋಪಿ ಚಿನ್ನಾ ನೀಡಿದ್ದಾನೆ.
ಕಳೆದ ಒಂದು ವಾರದ ಹಿಂದೆ ಎ1 ಆರೋಪಿ ಚಿನ್ನಾ ಎಂಬಾತನನ್ನ ಬಂಧಿಸಿದ್ದ ಪೊಲೀಸರು ಒಟ್ಟು 15 ಕ್ಕೂ ಹೆಚ್ಚು ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ರಿಜ್ವಾನ್ಗೆ ಮಧುಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಜಿಲ್ಲಾ ಆಸ್ಪತ್ರೆಗೆ ಕರೆತಂದು ದಾಖಲಿಸಲಾಗಿದೆ. ಮಧುಗಿರಿ ಡಿವೈಎಸ್ಪಿ ರಾಮಚಂದ್ರಪ್ಪ, ಸಿಪಿಐ ಹನುನಂತರಾಯಪ್ಪ, ಪಿಎಸ್ಐ ಶ್ರೀನಿವಾಸ್, ದಾದಾಪೀರ್, ಹಾಗೂ ಪೊಲೀಸ್ ಸಿಬ್ಬಂದಿ ರಮೇಶ್ ತಂಡ ಆರೋಪಿಯನ್ನು ಬಂದಿಸಲು ತೆರಳಿತ್ತು.
ಸ್ಥಳಕ್ಕೆ ಎಸ್ ಪಿ ಅಶೋಕ್ ವೆಂಕಟ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದು ಆರೋಪಿಯನ್ನು ಹೆಚ್ಚಿನ ಚಿಕಿತ್ಸೆ ಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.