ಬೆಂಗಳೂರು: ಈಗಾಗಲೇ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಮೈತ್ರಿಮಾಡಿಕೊಂಡು ಚುನಾವಣೆ ಎದುರಿಸುತ್ತಿದ್ದ ಜೆಡಿಎಸ್ ಬಿಜೆಪಿ ಪಕ್ಷಗಳು ಮುಂಬರುವ ಚುನಾವಣೆಗಳಲ್ಲೂ ಮೈತ್ರಿ ಮುಂದೂವರಿಸಲು ನಿರ್ಧರಿಸಿವೆ.
ಚುನಾವಣಾ ಸಂದರ್ಭದಲ್ಲಿ ಸೀಟು ಹಂಚಿಕೆ ಸಂದರ್ಭದಲ್ಲಿ ಯಾವುದೇ ಗೊಂದಲವಾಗದಂತೆ ಎಚ್ಚರ ವಹಿಸಲು ಎರಡು ಪಕ್ಷಗಳ ಮುಖಂಡರು ಮುಂದಾಗಿದ್ದಾರೆ.
ಈಗಾಗಲೇ ಸೀಟು ಹಂಚಿಕೆಗೆ ಸಂಬಂಧಪಟ್ಟಂತೆ ಜೆಡಿಎಸ್ ಪಕ್ಷದಲ್ಲಿ ಮರ್ನಾಲ್ಕು ಕ್ಷೇತ್ರಗಳಲ್ಲಿ ಟಿಕೆಟ್ ಆಕಾಂಕ್ಷಿಗಳ ಅಪಸ್ವರ ಕೇಳಿಬಂದ ಹಿನ್ನೆಲೆಯಲ್ಲಿ ಅಪಸ್ವರ ಎತ್ತದಂತೆ ಕಾರ್ಯಕರ್ತರು ಮುಖಂಡರಲ್ಲಿ ಜೆಡಿಎಸ್ನ ಕೇಂದ್ರಸಚಿವ ಕುಮಾರಸ್ವಾಮಿ ಹಾಗೂ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ಕುಮಾರಸ್ವಾಮಿ ಕಾರ್ಯನಿರ್ವಹಿಸಿದ್ದಾರೆ.
ಮುಂದಿನ ದಿನಗಳಲ್ಲಿ ಈ ಅಪಸ್ವರ ಹೆಚ್ಚಾಗದಂತೆ ಪಕ್ಷದ ಒಮ್ಮತದ ಅಭ್ಯರ್ಥಿಗಳನ್ನು ಬೆಂಬಲಿಸಿ ಗೆಲ್ಲಿಸಲು ಕಾರ್ಯಕರ್ತರಲ್ಲಿ ಮನವಿ ಮಾಡಿಕೊಳ್ಳಲು ತಯಾರಿ ನಡೆಸಿದ್ದಾರೆ.
ಈಗಾಗಲೇ ಎರಡು ಪಕ್ಷಗಳ ವತಿಯಿಂದ ಯಾವ ಯಾವ ಕ್ಷೇತ್ರದಲ್ಲಿ ಯಾರೂ ಸ್ಪರ್ಧೆಗಳಿಯುತ್ತಾರೆ ಎಂಬ ಚರ್ಚೆಗಳು ಅಲ್ಲಲ್ಲಿ ನಡೆದಿರುವುದರಿಂದ ಅಪಸ್ವರಗಳು ಎತ್ತದಂತೆ ಮಾಡಲು ಎರಡು ಪಕ್ಷಗಳ ಮುಖಂಡರು ಸಮನ್ವಯ ಸಭೆ ನಡೆಸಲು ತೀರ್ಮಾನಿಸಿದ್ದಾರೆ.
ಎರಡುಪಕ್ಷಗಳ ಮುಖಂಡರ ಸಮನ್ವಯ ಸಭೆ ಅತೀ ಶೀಘ್ರದಲ್ಲಿಯೇ ನಡೆಯಲಿದೆ ಎಂದು ಹೇಳಲಾಗಿದೆ.
ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಹಾಲಿಕೇಂದ್ರ ಸಚಿವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಈ ಸಮನ್ವಯ ಸಭೆಯ ನೇತೃತ್ವ ವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಈ ಎಲ್ಲದರ ಮಧ್ಯೆ ನಿನ್ನೆ ಹಾಲಿ ಶಾಸಕ ಬಿಜೆಪಿಯ ಹೊರಗಿರುವ ಬಸವನಗೌಡ ಪಾಟೀಲ್ ಯತ್ನಾಳ್ ಹಾಗೂ ಎಚ್.ಡಿ.ಕುಮಾರಸ್ವಾಮಿ ಪರಸ್ಪರ ಭೇಟಿಯಾಗಿ ಸುಮಾರು ೨೦ನಿಮಿಷಗಳಿಗೂ ಹೆಚ್ಚು ಕಾಲ ಮಾತನಾಡಿರುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ನಿನ್ನೆ ಅರಮನೆ ಮೈದಾನದಲ್ಲಿ ನಡೆದ ಹಾಲಿ ಸಂಸದ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಪುತ್ರಿಯ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಇಬ್ಬರು ಮುಖಂಡರು ಎದುರುಬದರಾಗಿ ಮಾತನಾಡುತ್ತ ನಂತರ ಪಕ್ಕಕ್ಕೆ ಹೋಗಿ ಪರಸ್ಪರ ರಹಸ್ಯವಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಈ ಇಬ್ಬರು ನಾಯಕರು ಒಟ್ಟಾಗಿ ಮಾತನಾಡಿರುವುದು ಬಿಜೆಪಿ ಜೆಡಿಎಸ್ನಲ್ಲಿ ಸಂಚಲನ ಮೂಡಿಸಿದೆ ಎನ್ನಲಾಗಿದೆ.



