ಬೆಂಗಳೂರು: ರಾಜ್ಯದಲ್ಲಿ ನಡೆಯಲಿರುವ ಎರಡು ವಿಧಾನಸಭಾ ಉಪಚುನಾವಣೆಗೆ ಬಿಜೆಪಿ ಈಗಾಗಲೇ ತನ್ನ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ಹೆಸರು ಘೋಷಣೆಯಾದ ಬೆನ್ನಲ್ಲೇ ಪಕ್ಷದಲ್ಲಿ ಭಿನ್ನಮತದ ಮುನ್ಸೂಚನೆ ಕಾಣಿಸಿಕೊಂಡಂತಾಗಿದೆ. ಈಗ ಅಧಿಕೃತವಾಗಿ ಘೋಷಣೆಯಾಗಿರುವ ಶ್ರೀನಿವಾಸ ಟಿ.ದಾಸಕರಿಯಪ್ಪ ಅವರು ಬಿಜೆಪಿ ಅತೃಪ್ತ ಬಣದ ಪ್ರಮುಖರಾದ ಜಿ.ಎಂ.ಸಿದ್ದೇಶ್ವರ್ ಅವರೊಂದಿಗೆ ಗುರುತಿಸಿಕೊಂಡವರಾಗಿದ್ದಾರೆ ಎಂದು ಹೇಳಲಾಗಿದೆ. ದಾವಣಗೆರೆ ಕ್ಷೇತ್ರದ ಟಿಕೆಟ್ಗಾಗಿ ಮಾಜಿ ಸಚಿವ ಎಂ.ಪಿ.ರೇಣಿಕಾಚಾರ್ಯ ಅವರು ಅಜಯ್ ಕುಮಾರ್ ಎಂಬುವರಿಗೆ ಟಿಕೆಟ್ ಕೊಡಿಸಲು 3 ದಿವಸ ದೆಹಲಿಯಲ್ಲೇ ಉಳಿದ ಸತತ ಪ್ರಯತ್ನ ನಡೆಸಿದ್ದರು. ಹೀಗಾಗಿಯೂ ಅವರು ಶಿಫಾರಸ್ಸು ಮಾಡಿದ ಅಭ್ಯರ್ಥಿಗೆ ಟಿಕೆಟ್ ದೊರೆಯದ ಕಾರಣ ರೇಣುಕಾಚಾರ್ಯ ಅವರು ತೀವ್ರ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗಿದೆ.
ತಮ್ಮನ್ನು ಸಂಪರ್ಕಿಸದೆ, ತಮ್ಮೊಂದಿಗೆ ಚರ್ಚಿಸದೆ ಟಿಕೆಟ್ ಘೋಷಣೆ ಮಾಡಿರುವುದು ಅಸಮಾಧಾನತಂದಿದೆ. ಇಂದು ಪಕ್ಷದ ಜಿಲ್ಲಾ ಮಟ್ಟದ ಕೋರ್ ಕಮಿಟಿ ಸಭೆ ನಡೆಯುತ್ತಿದ್ದು, ಈ ಸಭೆಯಲ್ಲಿ ರೇಣುಕಾಚಾರ್ಯ ಹಾಗೂ ಜಿ.ಎಂ. ಸಿದ್ದೇಶ್ವರ್ ಮುಖಾಮುಖಿಯಾಗಲಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿದ್ದು, ಈ ಸಭೆಯಲ್ಲಿ ನಡೆಯುವ ಚರ್ಚೆಯೂ ಕುತೂಹಲ ಮೂಡಿಸಿದೆ. ಒಟ್ಟಾರೆ ದಾವಣಗೆರೆ ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಭಿನ್ನಮತದ ಛಾಯೆ ಕಾಣಿಸಿಕೊಂಡಿದ್ದು, ಮತ ದಾನದ ದಿನದ ವೇಳೆಗೆ ಇದು ಯಾವ ಹಂತ ತಲುಪುತ್ತದೆ ಎಂದು ಕಾದು ನೋಡಬೇಕಿದೆ.
ಟಿಕೆಟ್ ಘೋಷಣೆಯಲ್ಲೇ ಬಿಜೆಪಿಯಲ್ಲಿ ಭಿನ್ನಮತದ ಮುನ್ಸೂಚನೆ



