ಶಿಡ್ಲಘಟ್ಟ ಗ್ರಾಮಾಂತರ: ತಾನು ಕೆ.ಪಿ.ಎಸ್.ಸಿ.ಯ ಪ್ರಮುಖ ಹುದ್ದೆಯಲ್ಲಿದ್ದು, ಸರ್ಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ನೌಕರಿ ಕೊಡಿಸದೆ ವಂಚಿಸಿದ ವ್ಯಕ್ತಿಯನ್ನು ಶಿಡ್ಲಘಟ್ಟ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
ಕೋಲಾರ ಜಿಲ್ಲೆ ವೇಮಗಲ್ ಹೋಬಳಿ ತೋಕಲಘಟ್ಟ ಗ್ರಾಮದ ವಾಸಿ ಅನಿಲ್ ಕುಮಾರ್ ಬಂಧಿತ ಆರೋಪಿ.
ತಾಲ್ಲೂಕಿನ ಜಂಗಮಕೋಟೆ ವಾಸಿ ಗೋಪಾಲಕೃಷ್ಣ ಅವರಿಗೆ ಅನಿಲ್ ಕುಮಾರ್ ಪರಿಚಯವಾಗಿದ್ದು ನಾನು ಕೆ.ಪಿ.ಎಸ್.ಸಿಯಲ್ಲಿ ಪ್ರಮುಖ ಹುದ್ದೆಯಲ್ಲಿದ್ದೇನೆ. ನಿಮ್ಮ ಮಗನಿಗೆ ಸರ್ಕಾರಿ ನೌಕರಿ ಕೊಡಿಸುತ್ತೇನೆ ಎಂದು ನಂಬಿಸಿದ್ದಾನೆ. ಇದರಿಂದ ಗೋಪಾಲಕೃಷ್ಣ ಆಗಾಗ ವಿವಿಧ ಬ್ಯಾಂಕ್ ಖಾತೆಗಳಿಗೆ ೨೧,೩೬,೦೦೦ ರೂಗಳನ್ನು ಜಮೆ ಮಾಡಿದ್ದಾನೆ.
ಆದರೆ ಎಷ್ಟು ದಿನ ತಿಂಗಳು ಕಳೆದರೂ ನೌಕರಿ ಮಾತ್ರ ಕೊಡಿಸಿಲ್ಲ. ಇದರಿಂದ ಅನುಮಾನಗೊಂಡ ಗೋಪಾಲಕೃಷ್ಣ ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ನಡೆದ ಘಟನೆ ವಿವರಿಸಿ ದೂರು ನೀಡಿದ್ದಾನೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅನಿಲ್ ಕುಮಾರ್ ನನ್ನು ಹೊಸಕೋಟೆ ತಾಲ್ಲೂಕು ಮಲ್ಲಿಮಾಕಲಹಳ್ಳಿ ಬಳಿ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಸರ್ಕಾರಿ ನೌಕರಿ ಕೊಡಿಸುವುದಾಗಿ ಹೇಳಿ ಪಡೆದ ಹಣವನ್ನು ಆನ್ ಲೈನ್ ಬೆಟ್ಟಿಂಗ್ ಜೂಜಾಡಿ ಕಳೆದುಕೊಂಡು ಇರುವುದಾಗಿ ಹೇಳಿದ್ದಾನೆ. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತನಿಖೆ ನಡೆಸಿ ಕಾರ್ಯಾಚರಣೆ ಮಾಡಿ ಆರೋಪಿ ಬಂಧಿಸಿದ ಎಸ್ ಐ ಕೆ.ಸತೀಶ್, ಸಿಬ್ಬಂದಿ ಸಂದೀಪ್ ಕುಮಾರ್, ವೆಂಕಟೇಶ್, ಮಂಜುನಾಥ್ ಅವರನ್ನು ಎಸ್ಪಿ ಕುಶಲ್ ಚೌಕ್ಸೆ ಶ್ಲಾಘಿಸಿದ್ದಾರೆ.