This is the title of the web page
This is the title of the web page

ಪ್ರಶಸ್ತಿ ಮುಂದಿನ ಸಾಧನೆಗೆ ಪ್ರೇರಣೆ: ಸಿಎಂ

ಬೆಂಗಳೂರು: ಪ್ರಶಸ್ತಿಗಳು ಅಂತಿಮ ಗುರಿಯಾಗದೇ ಮುಂದಿನ ಸಾಧನೆಗೆ ಪ್ರೇರಣೆಯಾಗಬೇಕು. ಸರಣಿ ಸಾಧನೆ ಮಾಡಿದಾಗ ವ್ಯಕಿತ್ವ ವಿಕಸನವಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಶಿವಶ್ರೀ ಮೀಡಿಯಾ, ರಾಜ್ ನ್ಯೂಸ್ ಹಾಗೂ ರಾಜ್ ಮ್ಯೂಸಿಕ್ ವತಿಯಿಂದ ಆಯೋಜಿಸಿರುವ ವಿಶ್ವ ಮಹಿಳಾ ದಿನಾಚರಣೆ- ವರ್ಷದ ಸಾಧಕಿ ಪ್ರಶಸ್ತಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಸಾಧನೆ ನಿರಂತರವಾಗಿ ನಡೆಯಬೇಕು. ಅಸಾಧ್ಯವಾದುದನ್ನು ಸಾಧನೆ ಮಾಡಿದಾಗ ಅದು ಸಾಧನೆಯಾಗುತ್ತದೆ. ಕಷ್ಟಕರ ವಿಚಾರಗಳಲ್ಲಿ ಸಾಧಿಸಿ ತೋರಿಸಬೇಕು. ಯಶಸ್ಸು, ಸಾಧನೇ ಎರಡೂ ಬೇರೆ, ಬೇರೆ. ನಮ್ಮ ಯಶಸ್ಸಿನ ಮೂಲಕ ಸಮಾಜದ ವಿಕಸನ ಆಗುವಂಥ ಸಾಧ್ಯತೆ ಯಿದ್ದು, ನೂರಾರು ಜನ ಪ್ರೇರಣೆ ಪಡೆದು ಅವರೂ ಕೂಡ ಯಶಸ್ವಿಯಾದಾಗ ಸಾಧನೆಯಾಗುತ್ತದೆ. ಸಾಧನೆಗೆ ಇತಿಮಿತಿ ಇಲ್ಲ ಎಂದರು.

ಸ್ವಾಮಿ ವಿವೇಕಾನಂದರು ಸಾಧಕನಿಗೆ ಸಾವು ಅಂತ್ಯವಲ್ಲ ಸಾವಿನ ನಂತರವೂ ಬದುಕುವವನು ಸಾಧಕ ಎಂದಿದ್ದರು. ಅಂತಹ ಸಾಧನೆ ಮಾಡುವಂತಾಗಬೇಕು ಎಂದರು. ಆಗ ಒಟ್ಟಾರೆ ಲಾಭ ಸಮಾಜಕ್ಕೇ ಆಗಲಿದೆ ಎಂದರು.ಸುತ್ತೂರು ಶ್ರೀಗಳದ್ದು ದೊಡ್ಡ ಸಾಧನೆ ಮಾಡಿದ್ದಾರೆ. ಮೈಸೂರಿನ ಶ್ರೀಮಠಕ್ಕೆ ತನ್ನದೇ ದಿವ್ಯ ಪರಂಪರೆ ಇದೆ. ಸ್ವಾಮೀಜಿ ಗಳು ನೇತೃತ್ವ ವಹಿಸಿದ ಮೇಲೆ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯಾರ್ಜನೆ, ಅನ್ನದಾನ ಆಗಿದೆ.

ಕರ್ನಾಟಕದ ಒಳ ಹೊರಗೆ ವಿದ್ಯಾ ಸಂಸ್ಥೆಗಳನ್ನು ಕಟ್ಟಿದ್ದಲ್ಲದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಶಾಲಾ ಕಾಲೇಜುಗಳನ್ನು ತೆರೆದು ಭಾರತದ ಸಂಸ್ಕೃತಿ, ಪರಂಪರೆಯನ್ನು ಜಗತ್ತಿನಲ್ಲಿ ಹರಡುವ ಕೆಲಸ ಮಾಡಿದ್ದಾರೆ. ಇಂಥ ದೊಡ್ಡ ಸಾಧಕರ ಸಾನಿಧ್ಯದಲ್ಲಿ ಪ್ರಶಸ್ತಿ ಪಡೆಯುವುದು ಪುಣ್ಯ ಎಂದು ತಿಳಿಸಿದರು.

ಮೈಸೂರಿನ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಚಿವ ಮು ನಿರತ್ನ, ವ್ಯವಸ್ಥಾಪಕ ನಿರ್ದೇಶಕ ಶಿವರುದ್ರಪ್ಪ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ , ಶ್ರೀನಿವಾಸ ಹಲಕಟ್ಟಿ, ಸುರೇಶ್ ಶಾಸ್ತ್ರಿ, ನಟಿ ಸಪ್ತಮಿ ಗೌಡ, ಉಪಸ್ಥಿತರಿದ್ದರು.