ಮುಳಬಾಗಲು: ಇಂಡ್ಲುಕೆರೆಯಲ್ಲಿ ಸತತವಾಗಿ ಕಳೆದ ಎರಡು ಮೂರು ದಿನಗಳಿಂದ ಕೆರೆಯ ನೀರಿನಲ್ಲಿ ಅಲ್ಲಲ್ಲಿ ಮೀನುಗಳು ಸಾಯುತ್ತಿದ್ದವು. ಕ್ರಮೇಣ ಇದ್ದಕ್ಕಿದ್ದಂತೆ ಈಗ ಎಲ್ಲಾ ಮೀನುಗಳು ಸತ್ತು ಮೇಲಕ್ಕೆ ತೇಲಿಕೊಂಡಿವೆ. ಇದರಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದು ಮೀನು ಸಾಕಾಣಿಕೆದಾರರು ಅಸಹಾಯಕತೆ ವ್ಯಕ್ತಪಡಿಸಿದರು.
ಇಂಡ್ಲುಕೆರೆಯಲ್ಲಿ ಸಾಕಾಣಿಕೆ ಮಾಡಿದ 25ಲಕ್ಷ ಬೆಲೆಬಾಳುವ 2ಲಕ್ಷ ವಿವಿಧ ಬಗೆಯ ಮೀನುಗಳು ಇದ್ದಕ್ಕಿದ್ದಂತೆ ಕೆರೆಯಲ್ಲಿ ಮೃತಪಟ್ಟಿವೆ. ಇಂಡ್ಲುಕೆರೆ 40 ಎಕರೆ ವಿಸ್ತೀರ್ಣ ಹೊಂದಿದ್ದು, ಶ್ರೀ ಸೋಮೇಶ್ವರ ಸ್ವಾಮಿ ಮೀನು ಉತ್ಪನ್ನ ಮತ್ತು ಮಾರಾಟ ಸಹಕಾರ ಸಂಘದ ವತಿಯಿಂದ ಕೆಲ ಷೇರುದಾರರು ಕೆರೆಯನ್ನು ಗುತ್ತಿಗೆ ಪಡೆದು ಮೀನು ಸಾಕಾಣಿಕೆ ಮಾಡಲಾಗುತ್ತಿದೆ.
ರಾಹು, ಕಾಟ್ಲಾ, ಸಿಸಿ, ಗ್ಲಾಸ್ಕರ್ ಸೇರಿದಂತೆ ವಿವಿಧ ತಳಿಗಳ ಮೀನಿನ ಮರಿಗಳನ್ನು ಸಾಕಾಣಿಕೆ ಮಾಡಲಾಗುತ್ತಿದೆ. ಸುಮಾರು ವರ್ಷಗಳಿಂದ ಶ್ರೀ ಸೋಮೇಶ್ವರ ಸ್ವಾಮಿ ಮೀನು ಉತ್ಪನ್ನ ಮತ್ತು ಮಾರಾಟ ಸಹಕಾರ ಸಂಘದ ವತಿಯಿಂದ ಇಲ್ಲಿನ ಕೆರೆಯಲ್ಲಿ ಮೀನು ಸಾಕಾಣೆ ಮಾಡಿಕೊಂಡು ಬರಲಾಗುತ್ತಿದೆ. ಇದೇ ಮೊಟ್ಟಮೊದಲ ಬಾರಿಗೆ ಕೆರೆಯಲ್ಲಿ ಮೀನುಗಳು ಸಾವನ್ನಪ್ಪಿದ ಘಟನೆ ನಡೆದಿರುವುದು ತುಂಬಾ ಬೇಸರ ತರಿಸಿದೆ ಎಂದು ಅಳಲು ತೊಡಿಕೊಂಡರು.
ನಗರದಲ್ಲಿನ ಕೊಳಚೆ ನೀರು, ಸತ್ತ ಕೋಳಿ ರೆಕ್ಕೆ ಪುಕ್ಕ, ಆಸ್ಪತ್ರೆಯಲ್ಲಿ ಬಳಕೆ ವಸ್ತುಗಳು, ಮದ್ಯದ ಬಾಟಲಿಗಳು ಹಾಗೂ ತ್ಯಾಜ್ಯ ಮತ್ತು ಪ್ಲಾಸ್ಟಿಕ್ ಕೆರೆಗೆ ತಂದು ಹಾಕುವುದರಿಂದ ಕೆರೆಯ ನೀರು ಹದಗೆಡುತ್ತಿದೆ. ಅಲ್ಲದೆ ಕೆ.ಸಿ.ವ್ಯಾಲಿ ನೀರು ಬಂದಾಗಿನಿಂದ ಒಂದಲ್ಲ ಒಂದು ರೀತಿ ಮೀನು ಸಾಕಾಣಿಕೆಗೆ ತೊಂದರೆ ಉಂಟಾಗುತ್ತಿದೆ ಎಂದು ದೂರಿದ್ದಾರೆ.
ಕೆರೆಯಲ್ಲಿ ಸ್ವಚ್ಚತೆ ಕಾಪಾಡಲು ಸಂಬಂಧಿಸಿದ ಇಲಾಖೆ ಮುಂದಾಗಬೇಕು. ಲಕ್ಷಾಂತರ ಹಣ ಬಂಡವಾಳ ಹಾಕಿ ಮೀನು ಸಾಕಾಣಿಕೆ ಮಾಡುವುದು ತುಂಬಾ ಕಷ್ಟ. ಆದ್ದರಿಂದ ಮೀನು ಸಾಯುವುದರಿಂದ ಸಾಕಾಣಿಕೆದಾರರಿಗೆ ತುಂಬಲಾರದ ನಷ್ಟ ಎದುರಾಗುತ್ತದೆ. ಇದರಿಂದಾಗಿ ಕೆರೆ ಕಲುಷಿತವಾಗದಂತೆ ಸಹಕಾರವನ್ನು ನೀಡಬೇಕೆಂದು ಶ್ರೀ ಸೋಮೇಶ್ವರ ಸ್ವಾಮಿ ಮೀನು ಉತ್ಪನ್ನ ಮತ್ತು ಮಾರಾಟ ಸಹಕಾರ ಸಂಘದ ಕಾರ್ಯದರ್ಶಿ ಮಂಜುನಾಥ್ ಮನವಿ ಮಾಡಿದ್ದಾರೆ.
Leave a Review