ಬೆಂಗಳೂರು: ಮುಂದಿನ ಆರ್ಥಿಕ ವರ್ಷದ ಬಜೆಟ್ ಮಂಡನೆ ಮಾಡಲು ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿದ್ಧತೆ ನಡೆಸಿದ್ದಾರೆ. ಮುಂದಿನ ತಿಂಗಳ ಫೆ.16ರಂದು ರಾಜ್ಯ ಸರ್ಕಾರದ ಬಜೆಟ್ ಮಂಡನೆಯಾಗಲಿದೆ.
ಹಣಕಾಸು ಸಚಿವರಾಗಿರುವ ಮುಖ್ಯಮಂತ್ರಿಯವರು ಇದುವರೆಗೆ 14 ಬಜೆಟ್ ಮಂಡನೆ ಮಾಡಿದ್ದು, ಇದೀಗ ಫೆ.16ರಂದು 15ನೇ ಬಜೆಟ್ ಮಂಡಿಸಲು ತಯಾರಿ ನಡೆಸಿದ್ದಾರೆ. ಇಂದು ಸುಮಾರು 10ಕ್ಕೂ ಹೆಚ್ಚು ಇಲಾಖೆಗಳ ಅಧಿಕಾರಿಗಳೊಂದಿಗೆ ಪೂರ್ವಬಾವಿ ಸಭೆಯನ್ನು ಬೆಂಗಳೂರಿನ ರೇಸ್ಕೋರ್ಸ್ ರಸ್ತೆಯಲ್ಲಿರುವ ಶಕ್ತಿಭವನದಲ್ಲಿ ನಡೆಸುತ್ತಿದ್ದಾರೆ.
ಈ ಬಾರಿ ಮಂಡಿಸುವ ಬಜೆಟ್ ಭಾರಿ ಸವಾಲಿನದ್ದಾಗಿದ್ದು, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಘೋಷಿಸಿರುವ ಗ್ಯಾರಂಟಿ ಯೋಜನೆಗಳಾದ ಶಕ್ತಿ, ಅನ್ನಭಾಗ್ಯ,ಗೃಹಜ್ಯೋತಿ, ಗೃಹಲಕ್ಷ್ಮಿ, ಯುವನಿಧಿ ಯೋಜನೆಗಳಿಗಾಗಿ 59 ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿರಿಸಬೇಕಾಗಿದೆ. ಈ ಯೋಜನೆಗಳಿಗೆ 4 ಕೋಟಿಗೂ ಹೆಚ್ಚು ಫಲಾನುಭವಿಗಳಿದ್ದು, ಬೆಜೆಟ್ನಲ್ಲಿಮೀಸಲಿರಿಸುವ ಹಣ ಯಾವುದೇ ಮಧ್ಯವರ್ತಿಗಳ ಪಾತ್ರವಿಲ್ಲದೆ ನೇರವಾಗಿ ಫಲಾನುಭವಿಗಳ ಖಾತೆಗೆ ತಲುಪಲಿದೆ.
ಗ್ಯಾರಂಟಿ ಯೋಜನೆಗಾಗಿ ಹಣ ಮೀಸಲಿರಿಸುವುದು ಸೇರಿದಂತೆ ಹಲವು ಮಹತ್ವದ ಯೋಜನೆಗಳಿಗಾಗಿ ಹಣ ಒದಗಿಸಬೇಕಾಗಿದೆ.
ಇದುವರೆಗೂ ಮಂಡಿಸಿರುವ 14 ಬಜೆಟ್ಗಳ ಪೈಕಿ 1 ಬಜೆಟ್ ಮಾತ್ರ ಕೊರತೆಯದ್ದಾಗಿದ್ದು, ಫೆ.16ರಂದು ಮಂಡಿಸಲಿರುವ ಬಜೆಟ್ ಬಾರಿ ಸವಾಲಿನಿಂದ ಕೂಡಿದ್ದು, ಇಂದು ಪೂರ್ವಭಾವಿಯಾಗಿ ಮುಖ್ಯಮಂತ್ರಿಯವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ತೋಟಗಾರಿಕೆ, ಗಣಿ ಮತ್ತು ಭೂವಿಜ್ಞಾನ,
ರೇಷ್ಮೆ ಮತ್ತು ಪಶುಸಂಗೋಪನೆ, ಯೋಜನೆ, ಉನ್ನತ ಶಿಕ್ಷಣ, ಬೆಂಗಳೂರು ಅಭಿವೃದ್ಧಿ ಜಲಸಂಪನ್ಮೂಲ, ಸಣ್ಣನೀರಾವರಿ ವಿಜ್ಞಾನ ಮತ್ತು ತಂತ್ರಜ್ಞಾನ, ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರ, ಸಹಕಾರ ಸೇರಿದಂತೆ ಹಲವು ಇವಲಾಖೆಗಳ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಲಾಗುತ್ತಿದೆ.