ಹೊಸಕೋಟೆ: ರಾಷ್ಟ್ರವು ಕಳೆದ ಸುಮಾರು 10 ವರ್ಷಗಳಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದು ಇದಕ್ಕೆ ಹಿರಿಯರ ಕೊಡುಗೆ ಅಪಾರವಾದುದಾಗಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ಅವರು ನಗರದ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಮಾಸ್ಟರ್ಸ್ ಅಸೋಸಿ ಯೇಷನ್ ಕರ್ನಾಟಕ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ 43ನೇ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಕ್ರೀಡೆಯು ಸಮಾಜದ ಅವಿಭಾಜ್ಯ ಅಂಗವಾಗಿದ್ದು, ಹಿರಿಯರು ಯುವಕರಿಗೆ ಸ್ಪೂರ್ತಿಯಾಗಿದ್ದು ಇವರುಗಳ ಪರಿಶ್ರಮದ ಪರಿಣಾಮ ಇಂದು ದೇಶವು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ 100ಕ್ಕೂ ಹೆಚ್ಚಿನಪದಕಗಳನ್ನು ಪಡೆದುಕೊಂಡು ಏಷ್ಯಾ
ಖಂಡದಲ್ಲಿಯೇ 4ನೇ ಸ್ಥಾನ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಪ್ರತಿದಿನ ವ್ಯಾಯಾಮಮಾಡುವುದರಿಂದ ದೈಹಿಕ, ಮಾನಸಿಕ ಸಮತೋಲನ ಕಾಪಾಡಿಕೊಳ್ಳಲಷ್ಟೇ ಸಾಧ್ಯವಾಗುವುದಲ್ಲೆ ಮೆದುಳಿನ ಉತ್ತಮ ಕಾರ್ಯಾಚರಣೆಯಿಂದ ಆರೋಗ್ಯ ಹೊಂದಲು ಸಹಕಾರಿಯಾಗಲಿದೆ.ಯಾವುದೇ ದೇಶದ ಆರ್ಥಿಕ, ಸಾಮಾಜಿಕ
ಪ್ರಗತಿಯನ್ನು ಅಳೆಯಲು ಕ್ರೀಡಾಕೂಟಗಳಲ್ಲಿ ಪಡೆಯುವ ಪದಕಗಳು ಅಳತೆಗೋಲಾಗಿದೆ.
ಪೋಷಕರು ಸಹ ಮಕ್ಕಳ ಶಿಕ್ಷಣಕ್ಕೆ ನೀಡುವಷ್ಟೆ ಪ್ರಾಮುಖ್ಯತೆಯನ್ನು ಕ್ರೀಡಾಭ್ಯಾಸಕ್ಕೂ ಗಮನಹರಿಸಿ ಅಭಿರುಚಿಗೆ ತಕ್ಕಂತಹ ಕ್ರೀಡಾ
ಭ್ಯಾಸದಲ್ಲಿ ತೊಡಗಲು ಪ್ರೋತ್ಸಾಹಿಸಬೇಕು.ಮುಂದಿನ ವರ್ಷವೂ ಸಹ ಇಂತಹುದೇ ಕ್ರೀಡಾಕೂಟವನ್ನು ಆಯೋಜಿಸಲು ತಾವು ಸಿದ್ಧರಾಗಿದ್ದು ರಾಜ್ಯದ ಎಲ್ಲಾ 31 ಜಿಲ್ಲೆಗಳಿಂದ ಪ್ರತಿನಿಧಿಗಳು ಪಾಲ್ಗೊಳ್ಳುವಂತೆ ಮಾಡಬೇಕು ಎಂದರು.
ಮಾಸ್ಟರ್ಸ್ ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾದ ಸೆಕ್ರೆಟರಿ ಜನರಲ್ ಹಾಗೂ ರಾಜ್ಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಸಂಸ್ಥೆಯ ಅಧ್ಯಕ್ಷ ಡೇವಿಡ್ ಪ್ರೇಮನಾಥ್ ಮಾತನಾಡಿ ದೇಶದಾದ್ಯಂತ 35ವರ್ಷ ಮೇಲ್ಪಟ್ಟ 45,000 ಹಿರಿಯ ಕ್ರೀಡಾಪಟುಗಳು ಸಂಸ್ಥೆಯ ಸದಸ್ಯರಾಗಿ ನೋಂದಣಿಯಾಗಿದ್ದಾರೆ. ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಉತ್ತಮ ಸ್ಥಾನ ಪಡೆದವರನ್ನು ಫೆ.13ರಿಂದ ಫೆ.17ರವರೆಗೆ ಪುಣೆಯಲ್ಲಿ ನಡೆಯುವ ರಾಷ್ಟ್ರಮಟ್ಟದಲ್ಲಿ ರಾಜ್ಯವನ್ನು ಪ್ರತಿನಿಧಿಸಲು ಆಯ್ಕೆ ಮಾಡಲಾಗುವುದು.
ಇದೇ ರೀತಿ ರಾಷ್ಟ್ರಮಟ್ಟದಲ್ಲಿ ಉತ್ತಮ ಸ್ಥಾನ ಪಡೆದವರು ಆಗಸ್ಟ್ನಲ್ಲಿ ಸ್ವೀಡನ್ನಲ್ಲಿ ನಡೆಯುವ ವಿಶ್ವ ಮಟ್ಟದ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವರು. ಇತ್ತೀಚೆಗೆ ಫಿಲಿಫೈನ್ಸ್ನಲ್ಲಿ ನಡೆದ ವಿಶ್ವ ಕ್ರೀಡಾಕೂಟದಲ್ಲಿ ಭಾರತವು 264 ಪದಕಗಳನ್ನು ಗಳಿಸಿದ್ದು ಇದರಲ್ಲಿ ರಾಜ್ಯವು 18 ಪದಕಗಳನ್ನು ಪಡೆದಿದೆ ಎಂದು ತಿಳಿಸಿದರು.
ಮಾಸ್ಟರ್ಸ್ ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾದ ಜಂಟಿ ಕಾರ್ಯದರ್ಶಿ ಹಾಗೂ ರಾಜ್ಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ಎಚ್.ಸಿ.ಷಣ್ಮುಗಂ ಮಾತನಾಡಿ 2 ದಿನಗಳು ನಡೆಯುವ ಕ್ರೀಡಾಕೂಟದಲ್ಲಿ ಬೆಂಗಳೂರು ನಗರ, ಗಾಮಾಂತರ ಹಾಗೂ ವಿವಿಧ ಜಿಲ್ಲೆಗಳ ಸುಮಾರು 568 ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಎಲ್ಲರಿಗೂ ಸೂಕ್ತ ವಸತಿ ಸೌಲಭ್ಯದೊಂದಿಗೆ ದಾನಿ ಬಿ.ವಿ.ಬೈರೇಗೌಡರ ಸಹಕಾರದೊಂದಿಗೆ ಊಟೋಪಚಾರ ಸಹ ಕಲ್ಪಿಸಲಾಗಿದೆ.
ಕ್ರೀಡಾಪಟುಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಲ್ಲಾ ವ್ಯವಸ್ಥೆಗಳನ್ನು ಸಹ ಸಮರ್ಪಕವಾಗಿ ಮಾಡಲಾಗಿದೆ. ಹಿರಿಯರ ಕ್ರೀಡಾಕೂಟಕ್ಕೆ ಶಾಸಕ ಶರತ್ ಬಚ್ಚೇಗೌಡ ನೀಡುತ್ತಿರುವ ಸಹಕಾರ ಅಭಿನಂದನಾರ್ಹ ಎಂದರು.ಇದೇ ಸಂದರ್ಭದಲ್ಲಿ ಏಷ್ಯನ್ ಕ್ರೀಡಾ
ಕೂಟದಲ್ಲಿ ಪಾಲ್ಗೊಂಡು ಪ್ರಶಸ್ತಿ ಗಳಿಸಿದ ಹಿರಿಯಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು.
ಉದ್ಯಮಿ ಬಿ.ವಿ.ಬೈರೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು ಹಿರಿಯ ಕ್ರೀಡಾಪಟುಗಳು ಸ್ಪರ್ಧೆಗಳಲ್ಲಿ ಯಶಸ್ಸು ಸಾಧಿಸಲಿ ಎಂದು ಹಾರೈಸಿದರು.ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷಎಸ್.ನಾರಾಯಣಸ್ವಾಮಿ, ಕಾರ್ಯದರ್ಶಿ ಕೆ.ಮಂಜುನಾಥ್, ನಗರಸಭೆ ಸದಸ್ಯಕೇಶವಮೂರ್ತಿ, ಶ್ರೀವಾರಿ ಕಲ್ಯಾಣ ಮಂಟಪದಮಾಲೀಕ ಕೃಷ್ಣಮೂರ್ತಿ, ಹಿರಿಯ ಕ್ರೀಡಾಪಟು ಗಳಾದ ಎಚ್.ಆರ್.ಸೋಮನಾಥ್, ಉಮೇಶ್, ಮುಖಂಡರಾದ ಬಚ್ಚಣ್ಣ, ಆರ್.ಟಿ.ಸಿ. ಗೋವಿಂದರಾಜು, ಸಂದೀಪ್,
ವಿಜಯಕುಮಾರ್ ಇನ್ನಿತರರು ಉಪಸ್ಥಿತರಿದ್ದರು.