ಕೋಲಾರ: ತಾಲ್ಲೂಕಿನ 101 ಪ್ರೌಢಶಾಲೆಗಳಿಂದ ಈ ಬಾರಿ 5178 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿದ್ದು, ಡೆಸ್ಕ್, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲ ಸೌಲಭ್ಯಗಳಿಗೆ ಕೊರತೆಯಾಗದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎನ್.ಕನ್ನಯ್ಯ ಸೂಚನೆ ನೀಡಿದರು.
ಕೋಲಾರ ತಾಲ್ಲೂಕಿನ ವಿವಿಧ ಶಾಲೆಗಳ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, ಮಾ.25 ರಿಂದ ಏ.6 ರವರೆಗೂ ಎಸ್ಸೆಸ್ಸೆಲ್ಸಿ ಈ ಸಾಲಿನ ಮೊದಲ ಪರೀಕ್ಷೆ ನಡೆಯಲಿದ್ದು, ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಿ, ಪರೀಕ್ಷಾ ಪಾವಿತ್ರ್ಯತೆ ಕಾಪಾಡುವುದರ ಜತೆಗೆ ಮಕ್ಕಳು ಪರೀಕ್ಷೆ ಬರೆಯಲು ಉತ್ತಮ ವಾತಾವರಣ ಕಲ್ಪಿಸುವುದು ಅಗತ್ಯವಿದೆ ಎಂದರು.
ತಾಲ್ಲೂಕಿನ 101 ಪ್ರೌಢಶಾಲೆಗಳ ಪೈಕಿ 26 ಸರ್ಕಾರಿ, 16 ಅನುದಾನಿತ, 54 ಖಾಸಗಿ ಹಾಗೂ ಮೊರಾರ್ಜಿ,ಅಂಬೇಡ್ಕರ್ ವಸತಿ ಶಾಲೆಮತ್ತಿತರವು 5 ಶಾಲೆಗಳಿದ್ದು, ಎಲ್ಲಾ ಮಕ್ಕಳು ಪರೀಕ್ಷೆಗೆ ಸಿದ್ದತೆ ನಡೆಸಿದ್ದಾರೆ ಎಂದರು.ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರ್ಕಾರ ಈ ಬಾರಿ ಎಸ್ಸೆಸ್ಸೆಲ್ಸಿಗೆ ಮೂರು ಪರೀಕ್ಷೆಗಳನ್ನು ನಡೆಸುತ್ತಿದೆ,
ಇದು ಮೊದಲ ಪರೀಕ್ಷೆಯಾಗಿದ್ದು, ಇಲ್ಲಿ ನೊಂದಾಯಿಸಿ ಪರೀಕ್ಷೆ ಬರೆದವರು ಫೇಲಾದರೆ ಅಥವಾ ಇನ್ನೂ ಹೆಚ್ಚು ಅಂಕಗಳಿಸುವ ಆಸಕ್ತಿ ಇದ್ದರೆ 2 ಅಥವಾ ಮೂರನೇ ಪರೀಕ್ಷೆ ಬರೆಯಲು ಸಹಾ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.ಕೋಲಾರ ತಾಲ್ಲೂಕಿನಲ್ಲಿ ಒಟ್ಟು 18 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತಿದ್ದು, ಇದರಲ್ಲಿ ನಗರ ಪ್ರದೇಶದಲ್ಲಿ 8 ಹಾಗೂ ಗ್ರಾಮೀಣ ಪ್ರದೇಶದಲ್ಲಿ 10 ಕೇಂದ್ರಗಳಿದ್ದು, 14 ಕ್ಲಸ್ಟರ್ ಸಹಿತ ಹಾಗೂ 4 ಕ್ಲಸ್ಟರ್ ರಹಿತ ಕೇಂದ್ರಗಳಾಗಿವೆ ಎಂದು ವಿವರಿಸಿದರು.
ಎಸ್ಸೆಸ್ಸೆಲ್ಸಿ ಸುಗಮ ಪರೀಕ್ಷೆಗೆ 450ಕ್ಕೂ ಹೆಚ್ಚುಮಂದಿಯನ್ನು ನೇಮಿಸಿಕೊಂಡಿದ್ದು, ಇದರಲ್ಲಿ 350 ಮಂದಿ ಕೊಠಡಿ ಮೇಲ್ವಿಚಾರಕರು, 18 ಕೇಂದ್ರಗಳಿಗೂ ತಲಾ ಒಬ್ಬೊಬ್ಬರಂತೆ 18 ಮಂದಿ ಮುಖ್ಯ ಅಧೀಕ್ಷಕರು, 18 ಮಂದಿ ಕಸ್ಟೋಡಿಯನ್ಸ್, 18 ಮಂದಿ ಸ್ಥಾನಿಕ ಜಾಗೃತದಳ ಸಿಬ್ಬಂದಿ ಹಾಗೂ 18 ಮಂದಿ ಮೊಬೈಲ್ ಸ್ವಾಧೀನಾಧಿಕಾರಿಗಳನ್ನು ನೇಮಿಸಿಕೊಳ್ಳಲಾಗಿದೆ.
ಉಳಿದಂತೆ ಅಧಿಕ ಮಕ್ಕಳಿರುವ ಮೂರು ಕೇಂದ್ರಗಳಿಗೆ 3 ಮಂದಿ ಉಪಮುಖ್ಯ ಅಧೀಕ್ಷಕರು, ಪ್ರಶ್ನೆಪತ್ರಿಕೆಗಳನ್ನು ಖಜಾನೆಯಿಂದ ಪರೀಕ್ಷಾ ಕೇಂದ್ರಕ್ಕೆ ತಲುಪಿಸಲು ಮಂದಿ ಮಾರ್ಗಾಧಿಕಾರಿಗಳನ್ನು ನೇಮಿಸಿಕೊಂಡಿದ್ದು, ಎಲ್ಲರಿಗೂ ಈಗಾಗಲೇ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.
ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆಯಾಗಿರುವುದನ್ನು ದೃಢಪಡಿಸಿಕೊಳ್ಳಲಾಗಿದೆ, ಆಸನ ವ್ಯವಸ್ಥೆ ಮಾಡಿದ್ದು, ಯಾವುದೇ ಮಗುವನ್ನು ನೆಲದಲ್ಲಿ ಕೂರಿಸಿ ಪರೀಕ್ಷೆ ಬರೆಸುವಂತಿಲ್ಲ ಎಂದು ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ, ಕುಡಿಯುವ ನೀರು, ಶೌಚಾಲಯ ಕಾಂಪೌಂಡ್, ವಿದ್ಯುತ್ ಸರಬರಾಜು, ಕೊಠಡಿಗಳಲ್ಲಿ ಗಾಳಿ ಬೆಳಕು ಇರುವಂತೆ ನೋಡಿಕೊಳ್ಳಲು ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
ಕೋಲಾರ ತಾಲ್ಲೂಕಿನ 18 ಪರೀಕ್ಷಾ ಕೇಂದ್ರಗಳಿಗೂ ಅಗತ್ಯವಾದ ಉತ್ತರ ಪತ್ರಿಕೆ ಮತ್ತಿತರ ಪರೀಕ್ಷಾ ಸಾಮಗ್ರಿಗಳನ್ನು ಮುಖ್ಯಅಧೀಕ್ಷಕರ ವಶಕ್ಕೆ ನೀಡಿದ್ದು, ಈಗಾಗಲೇ ಕೇಂದ್ರದಲ್ಲಿ ಭದ್ರಪಡಿಸಲಾಗಿದೆ ಎಂದ ಅವರು, ಶಾಲೆಗಳಲ್ಲಿ ಮಂಡಳಿಯಿಂದ ಆನ್ಲೈನ್ನಲ್ಲಿ ಬಂದಿರುವ ಪ್ರವೇಶಪತ್ರಗಳನ್ನು ಮುಖ್ಯಶಿಕ್ಷಕರು ಡೌನ್ಲೋಡ್ ಮಾಡಿಕೊಂಡು ಮಕ್ಕಳಿಗೆ ವಿತರಿಸಲು ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
ಪರೀಕ್ಷೆಗೆ ಮುನ್ನಾ, ಪರೀಕ್ಷೆಗಳ ನಡುವೆ ಇರುವ ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕು, ಮನೆಗಳಲ್ಲಿ ಪೋಷಕರು ಮಕ್ಕಳ ಓದುವಿಕೆ ಕುರಿತು ಗಮನಹರಿಸಬೇಕು ಎಂದು ಕೋರಿದ ಅವರು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ದರಾಗಿರುವ ಮಕ್ಕಳಿಗೆ ಶುಭ ಕೋರಿದರು.