ಶ್ರೀಮೈಲಾರಲಿಂಗೇಶ್ವರ ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ಆರ್ ಕೆ ನಿರ್ದೇಶಿಸಿರುವ “ಕಾಣೆಯಾಗಿದ್ದಾಳೆ” ಹುಡುಕಿಕೊಟ್ಟವರಿಗೆ ಬಹುಮಾನ ಚತ್ರ ತೆರೆಗೆ ಬರಲು ಸಿದ್ದವಾಗಿದ್ದು, ಡಿಸೆಂಬರ್ ನಲ್ಲಿ ಬಿಡುಗಡೆಯಾಗಲಿದೆ. ಇತ್ತೀಚಿಗೆ ಈ ಚಿತ್ರದ ಹಾಡೊಂದನ್ನು ದಾವಣಗೆರೆ ಮಹಾನಗರ ಪಾಲಿಕೆಯ ಉಪ ಮೇಯರ್ ಯೋಗೇಶ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ನಂತರ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಹೆಚ್ಚಿನ ಮಾಹಿತಿ ನೀಡಿದರು.
ಇದೊಂದು ನೈಜ ಹಾಗೂ ಕಾಲ್ಪನಿಕ ಕಥಾ ಆಧಾರಿತ ಚಿತ್ರ. ಸಾಮಾಜಿಕ ಜಾಲತಾಣಗಳನ್ನು ಹೆಣ್ಣುಮಕ್ಕಳು ನಿಯಮಿತವಾಗಿ ಬಳಸಬೇಕು. ಇಲ್ಲದಿದ್ದರೆ ಅಪಾಯ ಖಂಡಿತ ಎಂಬ ವಿಷಯವನ್ನು ಈ ಚಿತ್ರದ ಮೂಲಕ ಹೇಳಿದ್ದೇವೆ. ಕರ್ನಾಟಕದ ಮೂವತ್ತು, ನಲವತ್ತು ಸುಂದರ ಸ್ಥಳಗಳಲ್ಲಿ ಚಿತ್ರೀಕರಣ ನಡೆದಿದೆ.
ಚಿತ್ರ ಡಿಸೆಂಬರ್ ನಲ್ಲಿ ತೆರೆಗೆ ಬರಲಿದೆ ಎಂದು ನಿರ್ದೇಶಕ ಆರ್ ಕೆ ತಿಳಿಸಿದರು.ಇದು ನನ್ನ ಮೊದಲ ಚಿತ್ರ. ಕಾಲೇಜು ಹುಡುಗನ ಪಾತ್ರ ನನ್ನದು. ತಾಯಿ – ಮಗನ ಬಾಂಧವ್ಯದ ಸನ್ನಿವೇಶಗಳು ಚಿತ್ರದ ಹೈಲೆಟ್ ಎಂದರು ನಾಯಕ ವಿನಯ್ ಕಾರ್ತಿ.ಹಳ್ಳಿಯಿಂದ ನಗರಕ್ಕೆ ಬಂದ ಹುಡುಗಿಯ ಪಾತ್ರ ನನ್ನದು. ನಿರ್ದೇಶಕರು ಕಥೆ ತುಂಬಾ ಚೆನ್ನಾಗಿ ಮಾಡಿದ್ದಾರೆ ಎಂದು ಕೀರ್ತಿ ಭಟ್ ತಿಳಿಸಿದರು.
ಚಿತ್ರದಲ್ಲಿ ಅಭಿನಯಿಸಿರುವ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ ಎಂದು ಮಾತನಾಡಿದ ಹಿರಿಯ ನಟಿ ಗಿರಿಜಾ ಲೋಕೇಶ್, ನಾನು ನಾಯಕನ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಯಶೋಧ ಹಾಗೂ ಕೃಷ್ಣನ ಪ್ರೀತಿ ತರಹ ಈ ತಾಯಿ – ಮಗನ ಪ್ರೀತಿ ಎಂದರು.
ಚಿತ್ರದ ಮತ್ತೊಬ್ಬ ನಾಯಕಿ ಹರ್ಷಿತಾ ಕಲಿಂಗಲ್ ಸಹ ಚಿತ್ರದ ಕುರಿತು ಮಾತನಾಡಿದರು.