ಬೆಂಗಳೂರು: ಲೋಕಸಭಾ ಚುಣಾವಣೆ ಹಿನ್ನೆಲೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಅಂತಿಮ ಕಸರತ್ತು ನಡೆದಿದೆ.ಈಗಾಗಲೇ ಬಿಜೆಪಿ ವತಿಯಿಂದ ನಿನ್ನೆ ರಾಜ್ಯದ ಬಿಜೆಪಿ ನಾಯಕರೊಂದಿಗೆ ಪಕ್ಷದ ವರಿಷ್ಠರು ಮಹತ್ವದ ಸಮಾಲೋಚನೆ ನಡೆಸಿದ್ದಾರೆ.
28 ಕ್ಷೇತ್ರಗಳ ಅಭ್ಯರ್ಥಿಗಳ ಸಂಬಂಧಪಟ್ಟಂತೆ ಜೆಡಿಎಸ್ಗೆ ಬಿಟ್ಟುಕೊಡಬಹುದಾದ ಕ್ಷೇತ್ರಗಳು ಹಾಗೂ ತಮ್ಮ ಪಕ್ಷದ ವತಿಯಿಂದ ಕಣಕ್ಕಿಳಿಸಬೇಕಾದ ಸಮರ್ಥ ಅಭ್ಯರ್ಥಿಗಳ ಬಗ್ಗೆ ರಾಜ್ಯದ ಪ್ರಮುಖರೊಂದಿಗೆ ವರಿಷ್ಠರು ಚರ್ಚೆ ನಡೆಸಿದ್ದು, ಇಂದು ಅಥವಾ ನಾಳೆಯೊಳಗಾಗಿ ಅಂತಿಮ ಅಭ್ಯರ್ಥಿಗಳ ಪಟ್ಟಿಯನ್ನು 2 ಮೂರು ದಿನಗಳೊಳಗಾಗಿ ಪ್ರಕಟಿಸುವ ಸಾಧ್ಯತೆಯಿದೆ.
ಇತ್ತ ಕಾಂಗ್ರೆಸ್ನಿಂದ ಸಹ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿದ್ದು, ಇಂದು ಸಂಜೆ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ತನ್ನ ಅಭ್ಯರ್ಥಿಗಳ ಆಖೈರು ಪಟ್ಟಿಯನ್ನು ಸಿದ್ಧಪಡಿಸಲಿದೆ.ಇಂದು ಸಂಜೆ ನಡೆಯಲಿರುವ ಪಕ್ಷದ ಚುನಾವಣಾ ಸಮಿತಿಯಲ್ಲಿ ಪಾಲ್ಗೊಳ್ಳಲು ಈಗಾಗಲೇ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಅವರು ಇಂದು ದೆಹಲಿಗೆ ತೆರಳಿದ್ದಾರೆ.
ಬೀದರ್ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಸಭೆಯಲ್ಲಿ ಪಾಲ್ಗೊಳ್ಳಲು ಸಂಜೆಯ ವೇಳೆಗೆ ದೆಹಲಿ ತಲುಪಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ಈ ಇಬ್ಬರು ನಾಯಕರು ಮತ್ತು ಪಕ್ಷದ ಪ್ರಮುಖರೊಂದಿಗೆ ಚರ್ಚೆ ನಡೆಸಲಿರುವ ಎಐಸಿಸಿ ಅಧ್ಯಕ್ಷರ ನೇತೃತ್ವದ ಉನ್ನತ ಮಟ್ಟದ ಸಮಿತಿ ಅಂತಿಮವಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿ ಶೀಘ್ರದಲ್ಲಿಯೇ ಬಿಡುಗಡೆ ಮಾಡಲಿದೆ ಎಂದ ಪಕ್ಷದ ಮೂಲಗಳು ತಿಳಿಸಿವೆ.
ಇತ್ತ ಜೆಡಿಎಸ್ನಲ್ಲಿಯೂ ಸಹ ತಾನು ಎನ್ಡಿಎಯೊಂದಿಗೆ ಮೈತ್ರಿ ಮಾಡಿಕೊಂಡಿರುವುದರಿಂದ ತಮ್ಮ ಪಕ್ಷಕ್ಕೆ ದೊರೆಯಬಹುದಾದ ಸ್ಪರ್ಧಿಸುವ ಕ್ಷೇತ್ರಗಳು ಅಂತಿಮವಾದ ಕೂಡಲೇ ಯಾವ ಯಾವ ಕ್ಷೇತ್ರದಿಂದ ಯಾರನ್ನು ಕಣಕ್ಕಿಳಿಸಬೇಕು ಎಂಬುದರ ಬಗ್ಗೆ ಪಕ್ಷದ ಪ್ರಮುಖ ಮುಖಂಡರ ಜತೆ ಸಮಾಲೋಚನೆ ನಡೆಸಿರುವ ಮಾಜಿ ಮುಖ್ಯಮಂತ್ರಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ವರಿಷ್ಠರ ಅಂತಿಮ ನಿರ್ಧಾರವನ್ನು ಕಾದು ನೋಡುತ್ತಿದ್ದಾರೆ. ಒಟ್ಟಾರೆ ಮೂರು ಪಕ್ಷಗಳ ಅಭ್ಯರ್ಥಿ ಗಳ ಆಯ್ಕೆ ಬಗ್ಗೆ ಅಂತಿಮ ಹಂತದ ಕಸರತ್ತು ನಡೆದಿದೆ.



