ಚನ್ನಪಟ್ಟಣ: ಬಹು ಹಿಂದಿನಿಂದಲೂ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಚನ್ನಪಟ್ಟಣದ ರೈತರ ಅನುಕೂಲಕ್ಕಾಗಿ ಸರ್ಕಾರವು ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡುತ್ತಿದೆ, ಕ್ಷೇತ್ರದ ಶಾಸಕರು ಇದಕ್ಕೆ ಒತ್ತಾಸೆಯಾಗಿ ನಿಂತಿದ್ದಾರೆ ಎಂದು ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷರಾದ ಎಸ್. ಗಂಗಾಧರ್ ಅವರು ಹೇಳಿದರು.
ಪಟ್ಟಣದ ಬಾಲಕರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ವಾಣಿಜ್ಯ ಮೇಳ-2026 ಅನ್ನು ಉದ್ಘಾಟಿಸಿ ಮಾತನಾಡಿದರು.
ಚನ್ನಪಟ್ಟಣದಲ್ಲಿ ಆಯೋಜಿಸಿರುವ ಜಿಲ್ಲಾ ಮಟ್ಟದ ವಾಣಿಜ್ಯ ಮೇಳ ಉತ್ತಮವಾದ ಕಾರ್ಯಕ್ರಮ, ಚನ್ನಪಟ್ಟಣದ ರೈತರು ಬುದ್ಧಿವಂತರು, ಈ ಭಾಗದಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಾರೆ. ಬೆಂಗಳೂರು ದಕ್ಷಿಣ ಜಿಲ್ಲೆ ಹೈನುಗಾರಿಕೆ ಹಾಗೂ ರೇಷ್ಮೆಗೆ ದೊಡ್ಡ ಹೆಸರಾಗಿದೆ, ಚನ್ನಪಟ್ಟಣದ ಕೃಷಿಕರ ಅನುಕೂಲಕ್ಕಾಗಿ ಸರ್ಕಾರ ಕೆರೆಗಳಿಗೆ ನೀರು ತುಂಬಿಸುತ್ತಿದೆ ಎಂದು ಹೇಳಿದರು.
ಇಂದು ಕೃಷಿ ನಿರ್ಲಕ್ಷಿತ ಕ್ಷೇತ್ರವಾಗಿದೆ. ರೈತರ ಮಕ್ಕಳಿಗೆ ಹೆಣ್ಣು ಸಿಗುವುದು ಕಷ್ಟವಾಗಿದೆ. ಇಂದು ಡಿಗ್ರಿ, ಡಬಲ್ ಡಿಗ್ರಿ ಪಡೆದವರು ಸೇರಿದಂತೆ ಶಿಕ್ಷಿತರಿಗೆ ಉದ್ಯೋಗ ಸಿಗುವುದೇ ಕಷ್ಟವಾಗಿದೆ. ಆದರೆ ಕೃಷಿ ಕ್ಷೇತ್ರ ಹಾಗಲ್ಲ, ತನ್ನನ್ನು ನಂಬಿದ ಎಲ್ಲರಿಗೂ ಕೆಲಸ ಕೊಡುವ ಕ್ಷೇತ್ರವಾಗಿದೆ. ನಮ್ಮ ದೇಶದ ಜಿಡಿಪಿ ಉತ್ತಮ ಮಟ್ಟದಲ್ಲಿರಲು ಕೃಷಿಯೇ ಕಾರಣ. ಚನ್ನಪಟ್ಟಣ ತಾಲೂಕಿನಲ್ಲಿ ವಾಣಿಜ್ಯ ಬೆಳೆಗೆ ಹೆಚ್ಚಿನ ಉತ್ತೇಜನವಿದೆ, ರಾಗಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಭತ್ತ ಕಡಿಮೆ, ತೆಂಗು ಉತ್ತಮವಾಗಿದೆ ಹಾಗೂ ಹೇರಳವಾಗಿ ತರಕಾರಿಗಳನ್ನು ಬೆಳೆಯಲಾಗುತ್ತಿದೆ ಇದಕ್ಕೆ ಮುಖ್ಯ ಕಾರಣ ಬೆಂಗಳೂರಿನ ಮಾರುಕಟ್ಟೆ. ಆದ್ದರಿಂದ ಅಧಿಕಾರಿಗಳು, ರೈತರು ಯಾವ ಬೆಳೆಯನ್ನು ಬೆಳೆದರೆ ಹೆಚ್ಚು ಆದಾಯ ಬರುತ್ತದೆ ಎಂಬುದನ್ನು ತಿಳಿಸಿಕೊಡಬೇಕು ಎಂದು ಹೇಳಿದರು.
ದುರಾಸೆಗೆ ವಿಪರೀತವಾದ ರಾಸಾಯನಿಕಗಳನ್ನು ಬಳಸಿ ಬೆಳೆ ಬೆಳೆದರೆ ಅವು ಸಾಕಷ್ಟು ರೋಗಗಳಿಗೆ ಕಾರಣವಾಗುತ್ತದೆ. ಸಾವಯವ ಕೃಷಿಯಿಂದ ನಮ್ಮ ಮುಂದಿನ ಪೀಳಿಗೆಗೆ ಈ ಭೂಮಿಯನ್ನು ಉತ್ತಮ ಸ್ಥಿತಿಗೆ ಬಿಡಬಹುದು, ಸಾವಯವದೊಂದಿಗೆ ಸಿರಿಧಾನ್ಯಗಳನ್ನು ಬೆಳೆಯಬಹುದಾಗಿದೆ. ಕೃಷಿಯಲ್ಲಿ ಸಾಕಷ್ಟು ಸಾಧನೆ ಮಾಡಬಹುದು. ಸರ್ಕಾರದೊಂದಿಗೆ ರೈತರು ಕೈಜೋಡಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಕೃಷಿ ಕ್ಷೇತ್ರಕ್ಕೆ ಬರಬೇಕು. ಕೃಷಿ ಉತ್ತಮವಾಗಬೇಕೆಂದರೆ ಕೃಷಿ ಉದ್ಯಮವಾಗಿ ಬದಲಾಗಬೇಕು, ಕೃಷಿಯಲ್ಲಿ ಕಷ್ಟಗಳೂ ಇವೆ, ಆದರೆ ಇಂದು ಸಾಕಷ್ಟು ವೈಜ್ಞಾನಿಕ ವಿಧಾನಗಳಿದ್ದು ಅವುಗಳನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕು. ರೈತರ ಮುನ್ನಡೆಯಿಂದ ಅಭಿವೃದ್ಧಿ ಸಾಧ್ಯ ಎಂದು ಅವರು ಹೇಳಿದರು.
ಮಳವಳ್ಳಿಯ ಸಂಪೂರ್ಣ ಸಾವಯವ ಕೃಷಿಕರ ಸಂಘದ ಅಧ್ಯಕ್ಷರಾದ ಮಹೇಶ್ ಕುಮಾರ್ ಮಾತನಾಡಿದರು. ಟಿ.ಎಂ.ಎಫ್.ಎA.ಇ ಯೋಜನೆಯ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಕುಮುದಾ, ಕನಕಪುರದ ಆರ್ಗಾನಿಕ್ ಪ್ರೊಡ್ಯೂಸರ್ ಕಂಪನಿಯ ಸಿ.ಇ.ಒ ಸುಜಯ್, ಪ್ರಮೋದ್ ಕುಮಾರ್ ಅವರು ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಬೆಳೆ ಸಮೀಕ್ಷೆಯ ಖಾಸಗಿ ನಿವಾಸಿಗಳನ್ನು, ಉತ್ತಮ ಕೃಷಿ ಮಾಡುತ್ತಿರುವ ರೈತರಿಗೆ ಸನ್ಮಾನಿಸಲಾಯಿತು.
ಚನ್ನಪಟ್ಟಣ ನಗರಸಭೆ ಅಧ್ಯಕ್ಷರಾದ ನಾಗೇಶ್, ಸದಸ್ಯರಾದ ಮುನ್ನಾವರ್, ಚನ್ನಪಟ್ಟಣ ತಾಲ್ಲೂಕಿನ ಕೃಷಿಕ ಸಮಾಜದ ಅಧ್ಯಕ್ಷರಾದ ರಾಜೇಶ್, ಜಂಟಿ ಕೃಷಿ ನಿರ್ದೇಶಕರಾದ ಅಂಬಿಕಾ, ಪ್ರಭಾರ ಕೃಷಿ ಉಪ ನಿರ್ದೇಶಕರಾದ ವನಿತಾ, ಕೃಷಿ ವಿಜ್ಞಾನ ಕೇಂದ್ರ ವಿಜ್ಞಾನಿಗಳಾದ ದೀಪಾ ಪೂಜಾರ್, ತಾರಿಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವಸ್ತು ಪ್ರದರ್ಶನ ಮಳಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ರೈತರು ಭಾಗವಹಿಸಿ ಮಾಹಿತಿ ಪಡೆದರು.
ರೈತರ ಅನುಕೂಲಕ್ಕಾಗಿ ಸರ್ಕಾರವು ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡುತ್ತಿದೆ



