ಮಹದೇವಪುರ: ಕನ್ನಮಂಗಳ ಸಮೀಪದ ಖಾಜಿಸೋಣ್ಣೇಹಳ್ಳಿಯಲ್ಲಿಯ ಕುರುಬ ಸಮುದಾಯದ ಆರಾಧ್ಯದೈವ ಶ್ರೀ ಸಿದ್ದೇಶ್ವರ ಸ್ವಾಮಿಯ ದೊಡ್ಡ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
ಜಾತ್ರಾ ಮಹೋತ್ಸವ ಪ್ರಯುಕ್ತ ವೇಮಗಲ್ ತಾಲ್ಲೂಕು ಕುರುಬರಹಳ್ಳಿ ಬೀರೇಶ್ವರ ಕಲಾತಂಡ ವೀರಗಾರರ ತಲೆ ಮೇಲೆ ತೆಂಗಿನಕಾಯಿ ಹೊಡೆದು ದೇವರಿಗೆ ಅರ್ಪಿಸುವ ಪವಾಡ ಕಾರ್ಯ ನಡೆಸಿಕೊಟ್ಟರು, ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಕಲ್ಕೆರೆ, ಹಲಸೂರು, ದೇವನಹಳ್ಳಿ, ಕೆ.ಚನ್ನಸಂದ್ರ, ಶಿವಕೋಟೆ, ಶ್ರೀನಗರ ಸೇರಿದ ವಿವಿಧ ಪ್ರದೇಶಗಳಿಂದ ಕುಲಬಾಂಧವರು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದರು.
ಉತ್ಸವದಲ್ಲಿ ವೀರಗಾಸೆ, ಗೊರವನ ಕುಣಿತ, ಕಾಲಾಟಕಾರರು, ಡೊಳ್ಳು ಕುಣಿತ, ಪೂಜಾ ಕುಣಿತ, ಗೊಂಬೆ ಕುಣಿತ ಸೇರಿದಂತೆ ಜನಪದ ನೃತ್ಯ ಪ್ರದರ್ಶನ ಗಮನ ಸೆಳೆಯಿತು. ಜಾತ್ರಾ ಮಹೋತ್ಸವ ಪ್ರಯುಕ್ತ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ, ಪೂಜಾ ಕೈಂಕರ್ಯಗಳು ಜರುಗಿದವು, ದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.
ಇದೇ ವೇಳೆ ಮಾತನಾಡಿದ ದೇವಾಲಯದ ಪ್ರಧಾನ ಅರ್ಚಕ ಶ್ರೀನಿವಾಸ್, ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದೆ, ಮಳೆಯಿಲ್ಲದೆ ರೈತರು ಸಂಕಷ್ಟ ಸಿಲುಕಿದ್ದಾರೆ, ಕುಡಿಯುವ ನೀರಿಗೂ ಅಭಾವವಿದ್ದು, ರಾಜ್ಯದಲ್ಲಿ ಉತ್ತಮ ಮಳೆಯಾಗುವಂತೆ ದೇವರಲ್ಲಿ ಪ್ರಾರ್ಥಿಸಿ ಶ್ರದ್ಧಾಭಕ್ತಿಯಿಂದ ಒಂದು ತಿಂಗಳಿಂದ ಪೂಜಾ ಪುನಾಸ್ಕಾರ ಹಾಗೂ ಧಾರ್ಮಿಕ ಕಾರ್ಯಗಳು ನಡೆಸಿಕೊಂಡು ಬಂದಿದ್ದು, ಭಾನುವಾರ ಶ್ರೀ ಸಿದ್ದೇಶ್ವರ ದೇವರ ಉತ್ಸವ ನಡೆಯಿತು ಎಂದರು.
ಈ ಸಂದರ್ಭದಲ್ಲಿ ಸಿದ್ದೇಶ್ವರ ದೇವಸ್ಥಾನ ಸಮಿತಿಯ ಗೌರವಾಧ್ಯಕ್ಷ ಕಲ್ಕೆರೆ ಕೃಷ್ಣಪ್ಪ, ಪಟೇಲ್ ನಾಗೇಶ್, ಚಿಕ್ಕಮುನಿಶಾಮಪ್ಪ, ಮಾರೇಗೌಡ, ಗೋವಿಂದ್ ಮತ್ತಿತರರು ಇದ್ದರು.