ಮನೆ ಎಂದ ಮೇಲೆ ಅಡುಗೆ ಮನೆ ಇರಲೇ ಬೇಕು. ಅದು ಮನೆಯ ಮುಖ್ಯ ಭಾಗ. ಮನೆ ಮಂದಿಗೆಲ್ಲಾ ಮನ ಮೆಚ್ಚುವ ಮನೆ ಅಡುಗೆ ಮನೆ. ಮದುವೆ ಮನೆ, ಹೋಟೆಲ್ ಎಲ್ಲಾ ಕಡೆ ಅಡುಗೆ ಮನೆ ಇದ್ದೇ ಇರುತ್ತದೆ. ಮನೆಯಲ್ಲಿ ದೇವರ ಮನೆಯ ನಂತರ ಅಡುಗೆ ಮನೆಗೇ ಹೆಚ್ಚು ಮಹತ್ವವಿದೆ.
ಅನ್ನಪೂರ್ಣೇಶ್ವರಿ ನೆಲೆಸಿರುವ ಮನೆಯದು. ಅಡುಗೆ ಮನೆ ಸಣ್ಣದಿರಲಿ ದೊಡ್ಡದಿರಲಿ ಅಡುಗೆ ಮಾಡುವವರ ಮನಸು ದೊಡ್ಡದಿರಬೇಕು. ಅಲ್ಲಿ ಭಾವನೆಗಳ ಸಾಗರವಿದೆ, ಪ್ರೀತಿಯ ಆಗರವಿದೆ. ಅಡುಗೆ ಮಾಡುವವರ ಮನಸಿನ ಮೇಲೆ ಎಲ್ಲಾ ಪದಾರ್ಥಗಳು ಅವಲಂಬಿತವಾಗಿದೆ. ಮನಸು ಶುದ್ಧವಿರಬೇಕು. ಮಾಡುವ ಕೆಲಸದಲ್ಲಿ ಶ್ರದ್ಧೆ ಕಾಣಬೇಕು.
ಬೆಳಗ್ಗೆದ್ದು ದೇವರ ಪೂಜೆ ಮುಗಿಸಿ ಅಡುಗೆ ಮನೆಗೆ ಬಂದರೆ ಒಲೆಯನ್ನು ನಮಸ್ಕರಿಸಿ ಇಂದು ಮಾಡುವ ಅಡುಗೆ ನಿನಗೇ ಮೀಸಲು ಭಗವಂತ, ಎಲ್ಲಾ ಕೃಷ್ಣಾರ್ಪಣಮಸ್ತು ಎಂದು ಹೇಳಿಕೊಂಡು ಅಡಿಗೆ ಶುರುಮಾಡಿದಾಗ ಅಡುಗೆ ರುಚಿ ಹೆಚ್ಚು. ಅನ್ನ ಬೇಳೆ ಬೇಯುವಾಗ ನೀ ಮೊದಲು ನಾ ಮೊದಲು ಎಂದು ಬೇಯದೆ ಒಟ್ಟಾಗಿ ಬೇಯುತ್ತದೆ.
ಹಾಗಾಗಿ ಅಡುಗೆ ಬಡಿಸುವವರಿಗೂ ಸಮಾನ ಮನಸಿರಬೇಕು. ಊಟದ ವಿಷಯದಲ್ಲಿ ಯಾರಿಗೂ ಭೇದಭಾವ ಮಾಡಬಾರದು. ಅನ್ನ ಪರಬ್ರಹ್ಮ ಸ್ವರೂಪ. ಹಾಗಾಗಿ ಹಸಿದು ತಿನ್ನುವವರಿಗೆ ಹೇಗೆ ಅನ್ನ ಹಸಿವನ್ನು ನೀಗಿಸುತ್ತದೋ ಹಾಗೆಯೇ ಬಡಿಸುವವರು ತೃಪ್ತಿ ಆಗುವಂತೆ ಬಡಿಸಬೇಕು.
ಎಲ್ಲೇ ಆಗಲಿ ಯಾರೇ ಭೇಟಿ ಮಾಡಿದಾಗಲೂ ಮೊದಲು ಕೇಳುವುದು ಸಮಯ ನೋಡಿಕೊಂಡು ಕಾಫಿ, ತಿಂಡಿ, ಊಟ ಆಯ್ತಾ ಎಂದು. ಊಟಕ್ಕೆ ಅಷ್ಟು ಮಹತ್ವವಿದೆ. ಮದುವೆ ಸಮಯದಲ್ಲಿ ವಧು ಅನ್ವೇಷಣೆಯಲ್ಲಿದ್ದಾಗ ಗಂಡಿನ ಮನೆಯವರು ಹುಡುಗಿಗೆ ಮೊದಲು ಕೇಳುವುದು ಅಡುಗೆ ಮಾಡಕ್ಕೆ ಬರುತ್ತದಾ ಎಂದು.
ಹೀಗೆ ಕೇಳಿದಾಗ ಇಂದಿನ ಹೆಣ್ಣು ಮಕ್ಕಳಾಗಲಿ ಅವರ ತಾಯಿ ತಂದೆಯಾಗಲಿ ಮಗಳನ್ನು ಅಷ್ಟು ಓದಿಸಿದ್ದೇವೆ, ಇಷ್ಟು ಓದಿಸಿದ್ದೇವೆ ಅಡುಗೆ ಬಗ್ಗೆ ಕೇಳ್ತಿದಾರಲ್ಲ ಎಂಬ ಭಾವ ಮೂಡುತ್ತದೆ ಆದರೆ ಯಾರು ಏನೇ ಡಿಗ್ರಿ, ಡಾಕ್ಟರೇಟ್, ಸರ್ಟಿಫಿಕೇಟ್ ತಗೊಂಡರೂ ಅದರಿಂದ ಹೊಟ್ಟೆ ತುಂಬುವುದಿಲ್ಲ. ಬದಲಾಗಿ ಅಡುಗೆ ಪದಾರ್ಥಗಳಿಂದ ಮಾತ್ರ ಹೊಟ್ಟೆ ತುಂಬುತ್ತದೆ. ಊಟಕ್ಕೆ ಅಷ್ಟು ಮಹತ್ವವಿದೆ.
ಹಸಿದವರಿಗಷ್ಟೇ ಗೊತ್ತು ಹಸಿದವರ ಸಂಕಟ. ಅನ್ನ ಹಾಕುವುದರಲ್ಲಿ ಭೇದ ಮಾಡಬಾರದು. ಈಗ ಕಾಲ ಬದಲಾಗಿದೆ ಮನೆಯಲ್ಲಿ ಅಡುಗೆ ಮಾಡುವುದೇ ಕಡಿಮೆಯಾಗುತ್ತಿದೆ. ಹೊರಗಿನ ಊಟ ಅಭ್ಯಾಸವಾಗಿ ಅಡುಗೆ ಮನೆಯ ಮಹತ್ವ, ಮನದ ಭಾವನೆ ಎಲ್ಲಾ ಕಲ್ಮಶವಾಗುತ್ತಿದೆ.
ಅಡುಗೆ ಮನೆ ಭಾವನೆಗಳ ಆಗರ ಪಿಸು ಮಾತಿನ ಗುಟ್ಟಿನ ಮನೆ. ಹೆಂಡತಿಯೋ ತಾಯಿಯೋ ಅಡುಗೆ ಮನೆಯಲ್ಲಿದ್ದರೆ ಅವರ ಭಾವನೆ, ಕಣ್ಣೀರು, ದುಃಖ, ಸಂತೋಷ ಅಲ್ಲಿರುವ ಜಡವಸ್ತುಗಳಿಗೆ ಪರಿಚಯವಿರುತ್ತದೆ. ಅಪ್ಪ ಅಮ್ಮ ಹಣದ ವಿಚಾರ, ಮಕ್ಕಳ ವಿಚಾರ ಗುಟ್ಟಾಗಿ ಹೊರಗೆ ತಿಳಿಯದಂತೆ ಅಡುಗೆ ಮನೆಯಲ್ಲಿಯೇ ನಡೆಯುತ್ತದೆ. ಹೆಣ್ಣು, ಗಂಡು ನೋಡಲು ಬಂದಾಗ ಹೊರಗೆ ಎಲ್ಲರೂ ಕುಳಿತಿದ್ದಾಗ ಅವರ ಬಗ್ಗೆ ಮಾತುಕತೆ ಗುಟ್ಟಾಗಿ ಅಡುಗೆ ಮನೆಯಲ್ಲಿಯೇ ನಡೆಯುತ್ತದೆ.
ಕೆಲವು ಮನೆಗಳಲ್ಲಿ ಅತ್ತೆಯರು ಸೊಸೆಯಂದರಿಗೆ ಅಡುಗೆ ಮನೆ ಬಿಟ್ಟುಕೊಡುವುದಿಲ್ಲ. ಏಕೆಂದರೆ ತಮ್ಮ ಅಸ್ತಿತ್ವವನ್ನೇ ಬಿಟ್ಟುಕೊಟ್ಟ ಹಾಗೆ ಎಂದು ಅವರ ಕಲ್ಪನೆ. ಅಡುಗೆ ಮನೆ ಹಿಡಿತ ಅವರ ಕೈಯಲ್ಲಿಯೇ ಇರಬೇಕೆಂದು.ಊಟದ ಮಹತ್ವ ಗೊತ್ತಿರುವವರಿಗೆ ಅಡುಗೆ ಮನೆಯ ಮಹತ್ವವೂ ತಿಳಿದಿರುತ್ತದೆ. ಅಡುಗೆ ಮನೆ ಎಂದೂ ಸೆರೆಮನೆಯಲ್ಲ ಅದು ಸಿರಿ ಮನೆ.
-ಚಂಪಾ ಚಿನಿವಾರ್ ಆಪ್ತಸಮಾಲೋಚಕಿ