`ಲವ್ ಮಾಕ್ಟೇಲ್ 3′ ಚಿತ್ರದ ಕಥೆಗೆ ಸಂಬಂಧಿಸಿದAತೆ ಮೂಡಿದ್ದ ವಿರಸ ಈಗ ಸುಖಾಂತ್ಯ ಕಂಡಿದೆ. ನಟ ಹಾಗೂ ನಿರ್ದೇಶಕ ಡಾರ್ಲಿಂಗ್ ಕೃಷ್ಣ ಮತ್ತು ನಿರ್ಮಾಪಕ ಗುರು ದೇಶಪಾಂಡೆ ಅವರ ನಡುವೆ ಉಂಟಾಗಿದ್ದ ವಿವಾದಕ್ಕೆ ತೆರೆ ಬಿದ್ದಿದೆ.ಚಿತ್ರದ ಕಥೆಯ ಹಕ್ಕು ಮತ್ತು ಕ್ರಿಯೇಟಿವ್ ವಿಚಾರಗಳಲ್ಲಿನ ಭಿನ್ನಾಭಿಪ್ರಾಯಗಳ ಬಗ್ಗೆ ವರದಿ ಆದ ನಂತರ ಚರ್ಚೆಗೆ ಕಾರಣವಾಗಿತ್ತು. 2023ರ ಸಮಯದಲ್ಲಿ ನಡೆದ ಕಥಾ ಚರ್ಚೆಗಳಿಗೂ ಮತ್ತು ಈಗ ತೆರೆಯ ಮೇಲೆ ಬಂದಿರುವ ಚಿತ್ರಕ್ಕೂ ಸಾಮ್ಯತೆ ಇದೆ ಎಂಬ ವಿಚಾರವು ಉಭಯ ತಂಡಗಳ ನಡುವೆ ಮಾತಿನ ಚಕಮಕಿಗೆ ದಾರಿ ಮಾಡಿಕೊಟ್ಟಿತ್ತು.
ವಿವಾದವು ವೈಯಕ್ತಿಕ ಘರ್ಷಣೆಯತ್ತ ತಿರುಗುವ ಮುನ್ನವೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಧ್ಯಪ್ರವೇಶಿಸಿತು. ಮಂಡಳಿಯ ಅಧ್ಯಕ್ಷೆ ಜಯಮಾಲಾ, ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ್ ಕೆ ವಿಶ್ವನಾಥ್, ಮತ್ತು ಹಿರಿಯ ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಉಭಯ ಕಡೆಯವರೂ ಮುಕ್ತವಾಗಿ ಮಾತನಾಡಿದರು. ಕಥೆಯ ಎಳೆಗಳಲ್ಲಿ ಕಂಡುಬAದ ಸಾಮ್ಯತೆಯು ಉದ್ದೇಶಪೂರ್ವಕವಲ್ಲದ ಕೇವಲ ಕಾಕತಾಳೀಯ ಮತ್ತು ತಪ್ಪು ಗ್ರಹಿಕೆಗಳಿಂದ ಕೂಡಿದೆ ಎಂದು ಪರಸ್ಪರ ಒಪ್ಪಿಕೊಂಡಿದ್ದಾರೆ. ಚಿತ್ರರಂಗ ಎಂಬುದು ಒಂದು ಕುಟುಂಬದಂತಿದ್ದು, ಇಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಸಹಜ ಎಂಬ ಹಿರಿಯರ ಮಾತಿಗೆ ಗೌರವ ನೀಡಿ, ಪ್ರಕರಣವನ್ನು ಸೌಹಾರ್ದಯುತವಾಗಿ ಮುಕ್ತಾಯಗೊಳಿಸಲು ಇಬ್ಬರೂ ಒಮ್ಮತ ವ್ಯಕ್ತಪಡಿಸಿದ್ದಾರೆ.ಗುರು ದೇಶಪಾಂಡೆ ತಂಡವು ತಮ್ಮ ದೂರನ್ನು ಹಿಂಪಡೆದರೆ, ಡಾರ್ಲಿಂಗ್ ಕೃಷ್ಣ ಅವರು ಕೂಡ ಪ್ರಕರಣವನ್ನು ಕಾನೂನು ಮಟ್ಟಕ್ಕೆ ಕೊಂಡೊಯ್ಯುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
ಲವ್ ಮಾಕ್ಟೇಲ್ 3′ ವಿವಾದ: ಮುಗಿದಿದೆ



