ಬರವಣಿಗೆಯ ಗೀಳು ಸಣ್ಣ ವಯಸ್ಸಿನಿಂದ ಬರಬಹುದು ದೊಡ್ಡವರಾದ ಮೇಲೆ ಬರಬಹುದು ಮುದುಕರಾಗದ ಮೇಲೆಯೂ ಬರಬಹುದು. ಇದು ಇಂದಿನ ವಾಸ್ತವ. ಈಗ್ಯೆ 40-50 ವರ್ಷಗಳ ಹಿಂದೆ ಸರಸ್ವತಿಯ ಸೇವೆಯಾಗಿದ್ದ ಸಾಹಿತ್ಯ. ಇಂದು ವೃತ್ತಿ ಪ್ರವೃತ್ತಿ ಆದಾಯದ ಮೂಲವಾಗಿದೆ. ಅದರಲ್ಲೂ ಕಳೆದ ಎರಡು ದಶಕಗಳಲ್ಲಿ ಬರವಣಿಗೆಗೆ ಪ್ರೋತ್ಸಾಹ ಮತ್ತು ಅವಕಾಶಗಳು ಬಹಳವೇ ಆಗಿವೆ.
ಮೊದಲೆಲ್ಲಾ ಮುದ್ರಣ ಮಾಧ್ಯಮದಲ್ಲಿ ಯಾವುದೇ ಶಿಫಾರಸ್ಸು ಇಲ್ಲದೇ ಕಳುಹಿಸಿದ ಲೇಖನಗಳು ಪ್ರಕಟಗೊಳ್ಳುತ್ತಿದ್ದವು, ಇಂದೂ ಇದೆ ಆದರೂ ಪರಿಚಯದವರ ಮತ್ತು ಬೇರೆ ರೀತಿಯಲ್ಲಿ ಉಪಯೋಗಕ್ಕೆ ಬರುವವರ ಲೇಖನ ಮುದ್ರಣಗೊಳ್ಳುವ ಜಾಯಮಾನ, ಒಬ್ಬರ ಲೇಖನವನ್ನು ತಮ್ಮ ಹೆಸರಿನಲ್ಲಿ ಹಾಕಿಕೊಂಡು ಮುದ್ರಿಸಿಕೊಳ್ಳುವ ಜನರು, ಮುದ್ರಣ ಮಾಡಲು ಹಣ ಕೇಳುವ ಜನರು, ನಿಮ್ಮ ಲೇಖನ ಮುದ್ರಿಸಿಕೊಡುತ್ತೇನೆ ಅದಕ್ಕೆ ಪ್ರತಿಯಾಗಿ ನೀವು ನನಗೆ ಇಂತಹ ಕೆಲಸ ಮಾಡಿಕೊಡಬೇಕೆಂಬ ಜನರ ಪರಿಚಯವೂ ಇದೆ.
ಇದು ಪತ್ರಿಕೆಗಳ ಕಥೆ. ಎಲ್ಲರೂ ಇದೇ ರೀತಿ ಇರುತ್ತಾರೆ ಎಂಬ ವಿಷಯ ಹೇಳುತ್ತಿಲ್ಲ ಆದರೂ ಇಂದಿನ ಪರಿಸ್ಥಿತಿಯಲ್ಲಿ ಇಂತಹ ಲಾಬಿಗಳು ಹೆಚ್ಚಾಗಿದೆ.ಇನ್ನು ಪುಸ್ತಕ ಪ್ರಪಂಚದಲ್ಲಿ ಘೋಸ್ಟ್ ರೈಟಿಂಗ್ ಬಹಳ ಹಿಂದೆಯೂ ಕೇಳಿದ್ದೇವೆ. ಕೆಲವೊಮ್ಮೆ ತಮ್ಮ ಪರಿಚಯ ಆಗದಿರಲೆಂದು ಅನಾಮಿಕರಾಗಿ ಬರೆದರೆ ಇನ್ನು ಕೆಲವೊಮ್ಮೆ ಹಣದ ಅನುಕೂಲತೆಗೆ ತಮ್ಮ ಬರವಣಿಗೆಗೆ ಬೆಲೆ ಕಟ್ಟಿ ತಮ್ಮ ಪ್ರತಿಭೆಯನ್ನು ಮಾರಿಕೊಳ್ಳುವ ಪ್ರಸಂಗ ಬಂದಿರುತ್ತದೆ.
ಇನ್ನು ಕೆಲವರು ತಮಗೆ ಹೆಸರು ಬೇಡ ಹಣ ಬಂದರೆ ಸಾಕು ಎನ್ನುವ ಲೋಭದಿಂದ ತಮ್ಮ ಬರವಣಿಗೆಯ ಬೆಲೆ ಕಟ್ಟಿಕೊಂಡು ಬೇರೆಯವರಿಗೆ ಬರೆದು ಕೊಡುತ್ತಾರೆ. ದುಃಖದ ಸಂಗತಿಯೆಂದರೆ ಉತ್ತಮ ಕೃತಿಗಳನ್ನು ಬರೆದು ಕೊಟ್ಟವರು ತಮ್ಮ ಹೆಸರು ಹಾಕಿಕೊಂಡು ಪ್ರಶಸ್ತಿ ಪಡೆದಾಗ ಬಹಳ ನೋವಾಗುತ್ತದೆ. ಅದರಲ್ಲಿ ಅನಿವಾರ್ಯತೆಗೋ ಅವಶ್ಯಕತೆಗೊ ಬರೆದ ಲೇಖಕರಿಗಿಂತ ಆ ಲೇಖಕರ ಪ್ರತಿಭೆಗೆ ಮನಸೋತ ಹಿತೈಷಿಗಳಿಗೆ ದುಃಖವಾಗುತ್ತದೆ.
ಬರವಣಿಗೆ ಸ್ವಂತದ್ದೇ ಇರಲಿ, ಅನುವಾದವೇ ಇರಲಿ, ಕತೆ, ಕವನ, ಕಾದಂಬರಿ ಸಾಹಿತ್ಯದ ಯಾವುದೇ ಪ್ರಕಾರವೇ ಆಗಲಿ ಒಂದು ಪ್ರತಿಭಾವಂತ ಲೇಖಕರಿಗೆ ತಮ್ಮದೇ ಆದ ಛಾಪು ಇರುತ್ತದೆ. ಬರವಣಿಗೆ ಕಲೆಯಾದರೂ ಪ್ರತಿಭೆಯು ಸ್ವಂತದ್ದಾಗಿಬೇಕು.
ಇನ್ನು ಇಂದಿನ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬರೆಯುವವರೂ ಪ್ರತಿಭೆ ಇರುವವರೇ ಆದರೂ ಹಲವರು ಪ್ರಚಾರಕ್ಕೆ ಸ್ನೇಹಿತರನ್ನು ಮಾಡಿಕೊಂಡು ಲೈಕ್ ಕಾಮೆಂಟ್ ಮಾಡಲು ಪದೇ ಪದೇ ಕಳುಹಿಸುವುದು ಹೆಸರಿಗಾಗಿ ಪರದಾಡುವ ಸಾಹಿತಿಗಳು.
ಪುಸ್ತಕ ಪ್ರಕಟಿಸಿದವರು ಜನರಿಗೆ ನೀವು ಕೊಂಡು ಓದಿ ಎಂದು ಹೇಳಬಾರದೆಂದಲ್ಲ ಆದರೆ ನಮ್ಮ ಪುಸ್ತಕ ಕೊಂಡು ಓದಿ ಎಂಬ ಒತ್ತಾಯವೂ ಸಲ್ಲದು. ಎಷ್ಟೋ ಸಾಹಿ ತ್ಯಾಸಕ್ತರು ಕೊಂಡು ಓದುತ್ತಾರೆ. ಇನ್ನು ಕೆಲವು ಅನುಕೂಲ ಇರುವವರು ಕೊಂಡು ಓದುತ್ತಾರೆ. ಆದರೆ ಸಾಹಿತ್ಯ ಆಸಕ್ತಿ ಇದ್ದು ಅನುಕೂಲತೆ ಇಲ್ಲದವರಿಗೆ ಪ್ರೀತಿ ಪೂರ್ವಕವಾಗಿ ಪುಸ್ತಕ ಕೊಡಬಹುದು. ಇನ್ನು ಹಲವು ಕಡೆ ಕಾರ್ಯಕ್ರಮಗಳಿಗೆ ಹೋದರೆ ಕೊಳ್ಳಲೇ ಬೇಕಂತ ನಿಯಮಗಳೂ ಇವೆ. ಹಲವರು ಸೌಮ್ಯ ಸ್ವಭಾವದ ಲೇಖಕರಿಗೆ ಪುಸ್ತಕ ಕಳುಹಿಸಿ ಹಣ ಕೊಡುತ್ತೇನೆಂದು ಕಳಿಸದ ಸಂದರ್ಭಗಳೂ ಇರುತ್ತವೆ. ಇಲ್ಲಿ ಓದುಗರೂ ವಿಚಿತ್ರವಾಗಿದ್ದಾರೆ ಜೊತೆಗೆ ಬರಹಗಾರರೂ ಒಂದು ವಿಚಿತ್ರ ಜೀವದಂತೆ ನಡೆಯುವದೂ ಉಂಟು.
ಇನ್ನು ಅನುವಾದ ಕೃತಿಗಳ ಅನುವಾದ ಕೆಲಸವೂ ಕೂಡ ಬರವಣಿಗೆಯ ಭಾಗ ಇದರಲ್ಲಿ ನಮ್ಮ ಸಾಹಿತ್ಯಾಸಕ್ತಿಗೆ ಮಾಡುವುದು ಉದೋಗವಾಗಿ ಮಾಡುವುದು ಎರಡು ವಿಧ ಉದ್ಯೋಗಕ್ಕೆಂದು ಮಾಡಿದಾಗಲೂ ಮೋಸ ಹೋದ ಅನುಭವಗಳಾಗುತ್ತವೆ. ಅನುವಾದದ ಕೆಲಸ ಮಾಡಿಸಿಕೊಂಡು ನೀವು ಮಾಡಿದ್ದು ಸರಿಯಾಗಿ ಅಗಿಲ್ಲವೆಂದು ಹಣ ಕೊಡದವರು ಇದ್ದಾರೆ. ಉತ್ತಮವಾಗಿದೆ ಎಂದು ಸರಿಯಾದ ಮೊತ್ತವನ್ನು ಕೊಡುವವರೂ ಇದ್ದಾರೆ.
ಬರವಣಿಗೆಯ ಮಾಯಾಜಾಲ ಎಂದಿದ್ದು ಏಕೆಂದರೆ ಕೆಲವರು ಕೇವಲ ಹಣಕ್ಕಾಗಿ ಬರೆದರೆ , ಇನ್ನು ಕೆಲವರು ಕೇವಲ ಹೆಸರು ಪ್ರಸಿದ್ಧಿಗಾಗಿ ಬರೆಯುತ್ತಾರೆ. ನಿಮ್ಮ ಬರವಣಿಗೆ ಹೇಗೆ ಇರಲಿ ಒಂದು ನೈತಿಕತೆಯನ್ನು ಇಟ್ಟುಕೊಂಡರೆ ಉತ್ತಮ. ಎಡ ಪಂಥವಿರಲಿ, ಬಲ ಪಂಥವಿರಲಿ ಯಾವುದೇ ಪಂಥದವರಿರಲಿ ನಮ್ಮ ಭಾವ ಅಭಿವ್ಯಕ್ತಿ ಮತ್ತೊಬ್ಬರನ್ನು ದೂಷಿಸಿ ಅಥವಾ ನೋವು ಕೊಟ್ಟು ಆಗಬಾರದು. ನಿಮ್ಮ ಬರವಣಿಗೆಗೆ ಸಕಾರತ್ಮಕ ಕಾಮೆಂಟ್ ಬರಲಿ ನಕಾರತ್ಮಕ ಕಾಮೆಂಟ್ ಬರಲಿ ಟೀಕೆಯನ್ನು ಸ್ವೀಕರಿಸುವ ಗುಣ ಇರಲೇ ಬೇಕು.
ಈ ವಿಚಾರಕ್ಕೆ ಒಬ್ಬ ರಾಜಕಾರಣಿಯನ್ನು ನಾವು ಅನುಸರಿಸಬೇಕು. ಅವನಿಗೆ ಚಪ್ಪಲಿ ಏಟುಕೊಟ್ಟರೂ ಆತ ನಗುತ್ತಾ ಇರುತ್ತಾನೆ. ಹಾಗೆಂದು ನಮಗೆ ಸಂಬಂಧ ಇಲ್ಲದವರು ಚಪ್ಪಲಿಗೆ ಸಮ ನಮ್ಮ ಲೇಖನ ಎಂದರೆ ಅವರ ಮನೋಭಾವ ನಾವು ಕೂಡ ಅವರ ಮಟ್ಟಕ್ಕೆ ಇಳಿದು ಅವರೊಂದಿಗೆ ಜಗಳಕ್ಕೆ ನಿಂತರೆ ಏನು ಪ್ರಯೋಜನ ಅಲ್ಲವೇ?
ಇಂತಹ ಅನೇಕ ಮಾಯಾ ಜಾಲವನ್ನು ಹೊಂದಿರುವ ಬರವಣಿಗೆಯ ಪ್ರಪಂಚ ಎಲ್ಲರನ್ನೂ ಕೈ ಬೀಸಿ ಕರೆಯುತ್ತದೆ. ನಮ್ಮತನ ಕಳೆದುಕೊಳ್ಳದೇ, ನಮ್ಮ ವಿಚಾರ ಧಾರೆಯನ್ನು ನಾಲ್ಕು ಜನರಿಗೆ ಅನುಕೂಲವಾಗುವಂತೆ ತಿಳಿಸಿ ಮೆಚ್ಚಿದವರಿಗೆ ಋಣಿಯಾಗಿ , ಖಂಡಿಸಿದವರಲ್ಲಿ ಸತ್ವವಿದ್ದರೆ ಅವರ ಸಲಹೆ ಸ್ವೀಕರಿಸಿ ಇಲ್ಲದೇ ಹೋದಲ್ಲಿ ನಿರ್ಲಕ್ಷಿಸಿ ಗಾಂಭೀರ್ಯತೆಯಿಂದ ನಡೆದಲ್ಲಿ ಮಾಯಾಜಾಲದದಲ್ಲಿ ಕಳೆದು ಹೋಗದೇ. ಮಾಯಾ ಜಾಲದಲ್ಲಿಯೂ ಮಿನುಗಬಹುದು.