ಬೆಂಗಳೂರು: ಮೆಟ್ರೊ ಸುರಂಗ ಮಾರ್ಗದ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ದಿಢೀರ್ ಮಣ್ಣು ಕುಸಿದಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.ಮಸೀದಿ ಗೋಡೆಯ ಪಕ್ಕದಲ್ಲೇ ಮೂರೂವರೆ ಅಡಿಗಳಷ್ಟು ಆಳ ಮತ್ತು ನಾಲ್ಕು ಮೀಟರ್‍ನಷ್ಟು ಅಗಲದ ಗುಂಡಿ ನಿರ್ಮಾಣವಾಗಿದ್ದು, ಕೆಲಕಾಲ ಆತಂಕ ಸೃಷ್ಟಿಸಿತ್ತು.
ತಕ್ಷಣವೇ ಪರಿಹಾರ ಕಾಮಗಾರಿ ಆರಂಭಿಸಿದ ಬಿಎಂಆರ್‍ಸಿಎಲ್ ಅಧಿಕಾರಿಗಳು, ಕಾಂಕ್ರೀಟ್ ತುಂಬಿ ಗುಂಡಿ ಮುಚ್ಚಿದರು.
ಗೊಟ್ಟಿಗೆರೆ- ನಾಗವಾರ ಮೆಟ್ರೊ ರೈಲು ಮಾರ್ಗದಲ್ಲಿ ಡೇರಿ ವೃತ್ತದಿಂದ ನಾಗವಾರ ತನಕ ಸುರಂಗ ಮಾರ್ಗ ನಿರ್ಮಾಣವಾಗುತ್ತಿದೆ. ಟಿಬಿಎಂ(ಸುರಂಗ ಕೊರೆಯುವ ಯಂತ್ರ) ‘ರುದ್ರ’ ಡೇರಿ ವೃತ್ತದಿಂದ ಲಕ್ಕಸಂದ್ರ ಕಡೆಗೆ ಹೋಗುತ್ತಿದ್ದು, ಇದೇ ಜಾಗದಲ್ಲಿ ಗುಂಡಿ ಬಿದ್ದಿದೆ.
ನೆಲದಿಂದ 20 ಅಡಿ ಆಳದಲ್ಲಿ ಸುರಂಗ ನಿರ್ಮಾಣವಾಗುತ್ತಿದ್ದು, ಕಲ್ಲು ಬಂಡೆಯನ್ನು ಟಿಬಿಎಂ ಸೀಳುತ್ತಿದೆ. ಟಿಬಿಎಂನ ‘ಕಟರ್ ಹೆಡ್’ 6.5 ಮೀಟರ್ ಎತ್ತರ ಇದ್ದು, ಅದು ಸುತ್ತುವಾಗ ಬಂಡೆ ಮತ್ತು ಅದರ ಮೇಲಿನ ಮಣ್ಣನ್ನು ಕತ್ತರಿಸುತ್ತಿದೆ.
ಬಂಡೆಯ ಮೇಲ್ಭಾಗದ ಒಂದು ಮೀಟರ್‍ನಷ್ಟು ಮಣ್ಣನ್ನೂ ಕಟರ್ ಹೆಡ್ ಕೊರೆಯುತ್ತಿರುವುದರಿಂದ ಮೇಲ್ಪದರದ ಮಣ್ಣು ಕುಸಿದಿದೆ. ಕಾಂಕ್ರೀಟ್ ತುಂಬಿ ಗುಂಡಿ ಮುಚ್ಚಲಾಗಿದ್ದು, ಮಸೀದಿಗಾಗಲೀ ರಸ್ತೆಗಾಗಲಿ ಯಾವುದೇ ಅಪಾಯ ಇಲ್ಲ ಎಂದು ಬಿಎಂಆರ್‍ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯಕ್ಕೆ ಸಮೀಪದ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದ್ದು, ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ ಎಂದು ಆಡುಗೋಡಿ ಪೊಲೀಸರು ತಿಳಿಸಿದರು. ಇದೇ ಮಾರ್ಗದಲ್ಲಿ ಬ್ರಿಗೇಡ್ ರಸ್ತೆಯಲ್ಲಿ ಜನವರಿ 12ರಂದು ಸಿಂಕ್ ಹೋಲ್ ನಿರ್ಮಾಣವಾಗಿತ್ತು. ಅದಕ್ಕೂ ಒಂದು ವಾರ ಮುನ್ನ ಹೊರ ವರ್ತುಲ ರಸ್ತೆಯಲ್ಲಿ ನಿರ್ಮಾಣ ಹಂತದ ಮೆಟ್ರೊ ಪಿಲ್ಲರ್ ಕುಸಿದು ತಾಯಿ-ಮಗು ಮೃತಪಟ್ಟಿದ್ದರು.
Leave a Review