ವರದಿ: ಬೆಟ್ಟಹಳ್ಳಿ ರುದ್ರೇಶ್
ನೆಲಮಂಗಲ: ನ್ಯಾಯ ಕೊಡಿಸಬೇಕಾದ ಕಂದಾಯ ನ್ಯಾಯಾಲಯವೇ ಜೀವಂತ ವ್ಯಕ್ತಿಯೊಬ್ಬರನ್ನು ಮೃತರೆಂದು ಘೋಷಿಸಿ ಆದೇಶ ಹೊರಡಿಸಿರುವ ಆಘಾತಕಾರಿ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿಗಳ (ಂಅ) ಕಚೇರಿಯಲ್ಲಿ ನಡೆದಿದೆ.
ಅಧಿಕಾರಿಗಳ ಈ `ಕರ್ಮಕಾಂಡ’ದಿAದಾಗಿ ನೆಲಮಂಗಲ ತಾಲ್ಲೂಕಿನ ರೈತ ಹನುಮಂತಯ್ಯ ಎಂಬುವವರು ತಮಗೆ ತಾವೇ ಜೀವಂತವಾಗಿರುವುದನ್ನು ಸಾಬೀತು ಪಡಿಸಲು ಹೋರಾಡುವಂತಾಗಿದೆ.
ನೆಲಮAಗಲ ತಾಲ್ಲೂಕಿನ ಗೋವೇನಹಳ್ಳಿ ನಿವಾಸಿ ಹನುಮಂತಯ್ಯ ಬಿನ್ ಗಂಗಯ್ಯ ಅವರು ತ್ಯಾಮಗೊಂಡ್ಲು ಹೋಬಳಿಯ ಕೋಡಿಹಳ್ಳಿ ಗ್ರಾಮದ ಸರ್ವೆ ನಂ. ೩೪/೧ರಲ್ಲಿನ ೧೦ ಗುಂಟೆ ಜಮೀನಿಗೆ ಸಂಬAಧಿಸಿದAತೆ ಖಾತೆ ಬದಲಾವಣೆಗಾಗಿ ಅರ್ಜಿ ಸಲ್ಲಿಸಿದ್ದರು. ಈ ಜಮೀನನ್ನು ಅವರ ತಂದೆ ೧೯೫೯ರಲ್ಲೇ ಖರೀದಿ ಮಾಡಿದ್ದರು. ಈ ಹಿಂದೆ ಕಂದಾಯ ಕಾಯ್ದೆ ಕಲಂ ೧೩೬/೨ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಹನುಮಂತಯ್ಯನವರ ಪರವಾಗಿಯೇ ಆದೇಶ ನೀಡಲಾಗಿತ್ತು.
ಆದರೆ, ೨೦೨೧ರಲ್ಲಿ ಉಪವಿಭಾಗಾಧಿಕಾರಿ ತೇಜಸ್ ಕುಮಾರ್ ಅವರು ಇದೇ ಜಮೀನಿನ ವಿಷಯವಾಗಿ ಮತ್ತೊಮ್ಮೆ ಪ್ರಕರಣವನ್ನು ಕೈಗೆತ್ತಿಕೊಂಡಿದ್ದರು. ಈ ವೇಳೆ ಖುದ್ದು ಹನುಮಂತಯ್ಯನವರೇ ನ್ಯಾಯಾಲಯಕ್ಕೆ ಹಾಜರಾಗಿ, ಪ್ರಮಾಣಪತ್ರವನ್ನೂ ಸಲ್ಲಿಸಿದ್ದರು. ಹೀಗಿದ್ದರೂ ಸಹ, ಉಪವಿಭಾಗಾಧಿಕಾರಿಗಳು ಹೊರಡಿಸಿದ ಅಂತಿಮ ಆದೇಶದಲ್ಲಿ “ಹನುಮಂತಯ್ಯ ಮರಣ ಹೊಂದಿದ್ದಾರೆ” ಎಂದು ನಮೂದಿಸಲಾಗಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ಅಂದಿನ ನೆಲಮಂಗಲ ತಹಶೀಲ್ದಾರ್ ಕೂಡ ಆದೇಶ ಹೊರಡಿಸಿರುವುದು ರೈತ ಕುಟುಂಬವನ್ನು ಕಂಗಾಲಾಗಿಸಿದೆ.
ಭ್ರಷ್ಟಾಚಾರದ ಆರೋಪ – ಆಕ್ರೋಶ: ಬದುಕಿರುವ ವ್ಯಕ್ತಿಯನ್ನು ಕಾಗದದ ಮೇಲೆ ಸಾಯಿಸಿ ಅಕ್ರಮ ಖಾತೆ ಮಾಡಿಕೊಟ್ಟಿರುವ ಅಧಿಕಾರಿಗಳ ವಿರುದ್ಧ ಹನುಮಂತಯ್ಯನವರ ಮಗ ಕಿರಣ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನನ್ನ ತಂದೆ ಜೀವಂತವಾಗಿದ್ದಾರೆ, ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.
ಆದರೂ ಅವರನ್ನು ಮೃತರೆಂದು ತೋರಿಸಲಾಗಿದೆ ಎಂದರೆ ಕಂದಾಯ ಇಲಾಖೆಯಲ್ಲಿ ಲಂಚ ನೀಡಿದರೆ ಎಂತಹ ಆದೇಶವನ್ನಾದರೂ ಪಡೆಯಬಹುದು ಎಂಬುದು ಸಾಬೀತಾಗಿದೆ” ಎಂದು ಅವರು ದೂರಿದ್ದಾರೆ.
ರೈತರ ಒತ್ತಾಯ: ತಮಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಮತ್ತು ತಪ್ಪಿತಸ್ಥ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಎಂದು ರೈತ ಹನುಮಂತಯ್ಯ ಮತ್ತು ಅವರ ಕುಟುಂಬಸ್ಥರು ಕಂದಾಯ ಸಚಿವರಿಗೆ ಹಾಗೂ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಜನಸಾಮಾನ್ಯರ ಕೊನೆಯ ಭರವಸೆಯಾದ ಕಂದಾಯ ನ್ಯಾಯಾಲಯಗಳಲ್ಲೇ ಇಂತಹ ಅವಾಂತರಗಳು ನಡೆಯುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ಬದುಕಿರುವ ರೈತನನ್ನೇ `ಸಾಯಿಸಿದ’ ಕಂದಾಯ ಇಲಾಖೆ: ದೊಡ್ಡಬಳ್ಳಾಪುರ ಎಸಿ ಕಚೇರಿಯ ಎಡವಟ್ಟು…!



