ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ವೇಳೆ ಕೇಂದ್ರ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡರು.
ತೆರಿಗೆ ಹಂಚಿಕೆಯಲ್ಲಿ ರಾಜ್ಯ ಸರ್ಕಾರಕ್ಕೆ ಅನ್ಯಾಯವಾಗಿದೆ ಎಂದು ಪುನರುಚ್ಚರಿಸಿದರು. ಈ ವೇಳೆ ವಿಪಕ್ಷ ಬಿಜೆಪಿಯ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಸುಳ್ಳು ಹೇಳಬೇಡಿ ಎಂದು ವಿಪಕ್ಷಗಳ ನಾಯಕರು ಸದನದಲ್ಲಿ ಪ್ರತಿಭಟನೆ ನಡೆಸಿದರು. ಸಿಎಂ ಬಜೆಟ್ ಮಂಡನೆ ನಡೆಯುತ್ತಿರುವಂತೆಯೇ ಬಿಜೆಪಿ ಶಾಸಕರು ಸದನದಲ್ಲಿ ಸಿಎಂ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಅಸಮಾಧಾನ ಹೊರಹಾಕಿದರು.
ಸಿದ್ದರಾಮಯ್ಯ ಪ್ರಸಕ್ತ 15ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಸಾಕಷ್ಟು ಅನ್ಯಾಯವಾಗಿದೆ.
14ನೇ ಹಣಕಾಸು ಆಯೋಗದ ಶಿಫಾರಸುಗಳು ಜಾರಿಯಲ್ಲಿದ್ದಿದ್ದರೆ ರಾಜ್ಯಕ್ಕೆ ಹೆಚ್ಚು ಪಾಲು ಸಿಗುತ್ತಿತ್ತು ಎಂದು ಅಂಕಿ ಅಂಶಗಳ ಸಮೇತ ವಿವರಣೆ ನೀಡಿದರು.ಯುಪಿಎ ಸರ್ಕಾರದ ಅವಧಿಯಲ್ಲಿ ರಾಜ್ಯಕ್ಕೆ ಸಾಕಷ್ಟು ಅನುದಾನಗಳು ಸಿಕ್ಕಿದ್ದವು. ರಾಜ್ಯದ ಅಭಿವೃದ್ಧಿಗೆ ಅನುಕೂಲವಾಗಿತ್ತು. ಕಳೆದ 10 ವರ್ಷಗಳಿಂದ ಎನ್ಡಿಎ ಸರ್ಕಾರದಿಂದ ಜನವಿರೋಧಿ ಆಡಳಿತ ಇದೆ.
ಸಂಪನ್ಮೂಲ ಶೇಖರಣೆ ಕೆಲವೆಡೆ ಮಾತ್ರ ಕೇಂದ್ರೀಕೃತವಾಗಿದೆ ಎಂದು ಮುಖ್ಯಮಂತ್ರಿ ಭಾಷಣದ ವೇಳೆ ಕೇಂದ್ರ ಸರ್ಕಾರ ವಿರುದ್ಧ ಅಸಮಾಧಾನ ಹೊರ ಹಾಕಿದರು.ತಮ್ಮ ಗ್ಯಾರಂಟಿ ಯೋಜನೆಗಳನ್ನು ಪ್ರಸ್ತಾಪಿಸಿದ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ತಮ್ಮ ಗ್ಯಾರಂಟಿಯನ್ನು ಕದ್ದಿದೆ ಎಂದೂ ಲೇವಡಿ ಮಾಡಿದರು.
ನಾವು ಐದು ಗ್ಯಾರಂಟಿಗಳನ್ನು ಬಹಳ ಕಡಿಮೆ ಅವಧಿಯಲ್ಲಿ ಜಾರಿ ಮಾಡಿದ್ದೇವೆ. ಈ ಗ್ಯಾರಂಟಿ ಯೋಜನೆಗಳು ಚುನಾವಣಾ ಗಿಮಿಕ್ ಆಗಿರಲಿಲ್ಲ. ವಿಪಕ್ಷಗಳು ಈ ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಭಾಗ್ಯ ಎಂದು ಹಂಗಿಸಿದವು. ಸರ್ಕಾರದ ಬೊಕ್ಕಸ ಖಾಲಿ ಆಗಿದೆ ಎಂದು ಸುಳ್ಳುಗಳನ್ನು ಹೇಳಿ ಸರ್ಕಾರದ ನೈತಿಕ ಸ್ಥೈರ್ಯ ಕುಸಿಯಲು ಪ್ರಯತ್ನಿಸಿದವು ಎಂದು ಆರೋಪಿಸಿದರು.