ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದಲ್ಲಿ ತಾಲೂಕಿನ ಮುತಕದ ಹಳ್ಳಿ ಗ್ರಾಮದಲ್ಲಿ ತನ್ನ ಅನೈತಿಕ ಸಂಬಂಧಕ್ಕೆ ತಂಗಿ ಅಡ್ಡ ಬರುತ್ತಾಳೆಂದು ಆಕೆಯ ಆರು ವರ್ಷದ ಮಗನನ್ನು ಅಕ್ಕ ಕೊಲೆ ಮಾಡಿ ಹೂತಿಟ್ಟ ಪ್ರಕರಣ ಬೆಳಕಿಗೆ ಬಂದಿದೆ.
ಅಂಬಿಕಾ ಹಾಗೂ ಅನಿತಾ ಅಕ್ಕ ತಂಗಿಯರು. ಆದರೆ ಅಂಬಿಕಾ ಅನೈತಿಕ ಸಂಬಂಧ ಹೊಂದಿದ್ದ ವಿಚಾರ ಅನಿತಾಗೆ ತಿಳಿದು ಬಂದಿದೆ. ಅದರಂತೆ ವಿರೋಧವೂ ವ್ಯಕ್ತಪಡಿಸಿದ್ದಳು. ಇದರಿಂದ ಕೋಪಗೊಂಡ ಅಂಬಿಕಾ, ಅನಿತಾಳ ಆರು ವರ್ಷದ ಮಗ ಮಧುನನ್ನು ಕೊಲೆ ಮಾಡಿ ಮುತಕದಹಳ್ಳಿ ಗ್ರಾಮದ ಮಾವಿನ ತೋಪಿನಲ್ಲಿ ಹೂತು ಹಾಕಿದ್ದಾಳೆ. ಸ್ಥಳಕ್ಕೆ ಪೆರೆಸಂದ್ರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಎಸ್ಪಿ ಡಿ.ಎಲ್.ನಾಗೇಶ, ತನ್ನ ಇಬ್ಬರು ಮಕ್ಕಳನ್ನು ಕಿಡ್ನಾಪ್ ಮಾಡಿರುವ ಬಗ್ಗೆ ನಿನ್ನೆ ಅನಿತಾ ಎನ್ನುವವರು ದೂರು ನೀಡಿದ್ದರು. ಅನಿತಾ ಸ್ವತಃ ತನ್ನ ಅಕ್ಕ ಅಂಬಿಕಾ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗಿದೆ. ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಪತ್ತೆಯಾಗಿರುವ ಅಂಬಿಕಾಳನ್ನು ತನಿಖೆ ನಡೆಸಿದಾಗ ಪ್ರಕರಣ ಬಯಲಾಗಿದೆ ಎಂದರು.