೨೦ ವರ್ಷಗಳ ಬಳಿಕ ಭಾರತದಲ್ಲಿ ಪ್ರತಿಷ್ಠಿತ ಕಾಮನ್ ವೆಲ್ತ್ ಗೇಮ್ಸ್ ನಡೆಯುವುದು ಪಕ್ಕಾ ಆಗಿದೆ. ಗುಜರಾತ್ ರಾಜ್ಯನ ಅಹಮದಾಬಾದ್ ನಗರವು ೨೦೩೦ಕ್ಕೆ ಕಾಮನ್ವೆಲ್ತ್ ಗೇಮ್ಸ್ ಆತಿಥ್ಯ ವಹಿಸಲು ಕಾಮನ್ವೆಲ್ತ್ ಸ್ಪೋರ್ಟ್ಸ್ ಕಾರ್ಯಕಾರಿ ಮಂಡಳಿ ನಿರ್ಧಾರ ಮಾಡಿದೆ. ಈ ನಿಟ್ಟಿನಲ್ಲಿ ಭಾರತದೊಂದಿಗೆ ಸ್ಪರ್ಧೆಗೆ ಬಿದ್ದಿದ್ದ ನೈಜೀರಿಯಾದ ಅಬುಜಾವನ್ನು ಹಿಂದಿಕ್ಕಿರುವ ಭಾರತದ ಅಹಮದಾಬಾದ್ಗೆ ಕಾರ್ಯಕಾರಿ ಮಂಡಳಿ ಗೌರವವನ್ನು ಶಿಫಾರಸು ಮಾಡಿದೆ.
ಗ್ಲಾಸ್ಗೋದಲ್ಲಿ ನವೆಂಬರ್ ೨೬ರಂದು ನಡೆಯಲಿರುವ ಕಾಮನ್ವೆಲ್ತ್ ಸ್ಪೋರ್ಟ್ಸ್ ಸಾಮಾನ್ಯ ಸಭೆಯಲ್ಲಿ ಅಹಮದಾಬಾದ್ ಅನ್ನು ಅಧಿಕೃತವಾಗಿ ಆತಿಥೇಯ ನಗರವೆಂದು ದೃಢೀಕರಿಸಲಾಗುತ್ತದೆ. ಈ ಬಗ್ಗೆ ಮಾತನಾಡಿದ ಕಾಮನ್ವೆಲ್ತ್ ಸ್ಪೋರ್ಟ್ಸ್ ಹಂಗಾಮಿ ಅಧ್ಯಕ್ಷ ಡೊನಾಲ್ಡ್ ರುಕಾರೆ “೨೦೩೦ರ ಕಾಮನ್ವೆಲ್ತ್ ಗೇಮ್ಸ್ಗೆ ಆತಿಥ್ಯ ವಹಿಸಲು ತಮ್ಮ ಪ್ರಸ್ತಾವನೆಗಳನ್ನು ಅಭಿವೃದ್ಧಿಪಡಿಸುವಲ್ಲಿ ದೂರದೃಷ್ಟಿ ಮತ್ತು ಬದ್ಧತೆಯನ್ನು ತೋರಿಸಿದ ಭಾರತ ಮತ್ತು ನೈಜೀರಿಯಾ ಎರಡಕ್ಕೂ ನಾವು ಕೃತಜ್ಞರಾಗಿದ್ದೇವೆ. ಎರಡೂ ಪ್ರಸ್ತಾವನೆಗಳು ಸ್ಫೂರ್ತಿದಾಯಕವಾಗಿದ್ದವು, ನಮ್ಮ ಕಾಮನ್ವೆಲ್ತ್ ಕುಟುಂಬದೊಳಗಿನ ಅವಕಾಶದ ಪ್ರಮಾಣವನ್ನು ಪ್ರತಿಬಿಂಬಿಸುತ್ತವೆ.
ಕಾರ್ಯಕಾರಿ ಮಂಡಳಿಯು ಮೌಲ್ಯಮಾಪನ ಸಮಿತಿಯ ತೀರ್ಮಾನಗಳನ್ನು ಎಚ್ಚರಿಕೆಯಿಂದ ಪರಿಗಣಿಸಿದೆ ಮತ್ತು ನಮ್ಮ ಸದಸ್ಯರಿಗೆ ಅಹಮದಾಬಾದ್ ಅನ್ನು ಶಿಫಾರಸು ಮಾಡುತ್ತಿದೆ” ಎಂದಿದ್ದಾರೆ. ಜೊತೆಗೆ “ನಮ್ಮ ಶತಮಾನೋತ್ಸವ ಗೇಮ್ಸ್ ಳನ್ನು ಎದುರುನೋಡುತ್ತಿರುವ ಈ ಚಳವಳಿಗೆ ಇದು ಒಂದು ಮಹತ್ವದ ಮೈಲಿಗಲ್ಲು, ಮತ್ತು ನಮ್ಮ ಸದಸ್ಯರು ಅಂತಿಮ ನಿರ್ಧಾರ ತೆಗೆದುಕೊಳ್ಳಲಿರುವ ಗ್ಲಾಸ್ಗೋದಲ್ಲಿನ ಸಾಮಾನ್ಯ ಸಭೆಯನ್ನು ನಾವು ಈಗ ಎದುರುನೋಡುತ್ತಿದ್ದೇವೆ.
ನೈಜೀರಿಯಾದ ಪ್ರಸ್ತಾವನೆಯ ದೂರದೃಷ್ಟಿ ಮತ್ತು ಮಹತ್ವಾಕಾಂಕ್ಷೆಯಿAದ ಮಂಡಳಿಯು ಪ್ರಭಾವಿತವಾಗಿದೆ ಮತ್ತು ಅವರ ತಂಡದೊAದಿಗೆ ಭವಿಷ್ಯದ ಆತಿಥ್ಯ ಅವಕಾಶಗಳನ್ನು ಅನ್ವೇಷಿಸಲು ಕೆಲಸ ಮಾಡುವುದಕ್ಕೆ ನಾವು ನಮ್ಮ ಬದ್ಧತೆಯನ್ನು ದೃಢಪಡಿಸಿದ್ದೇವೆ. ಈ ನಿರ್ಧಾರವು ಕಾಮನ್ ವೆಲ್ತ್ ಗೇಮ್ಸ್ ಅನ್ನು ಆಫ್ರಿಕಾ ಖಂಡಕ್ಕೆ ಕೊಂಡೊಯ್ಯುವ ನಮ್ಮ ನಿರ್ಣಯವನ್ನು ಪ್ರತಿಬಿಂಬಿಸುತ್ತದೆ,” ಎಂದು ಸಹ ತಿಳಿಸಿದ್ದಾರೆ.
ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣವು ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಿದೆ. ಸುಮಾರು ೧,೩೦,೦೦೦ ಸಾಮರ್ಥ್ಯದ ಈ ಕ್ರೀಡಾಂಗಣದಲ್ಲಿ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭಗಳನ್ನು ಆಯೋಜಿಸುವ ಸಾಧ್ಯತೆಯಿದೆ.