ಅಸ್ಸಾಂ: ಅಸ್ಸಾಂನ ಸಿಲ್ಚಾರ್ನಲ್ಲಿ ಶಿಲ್ಲಾಂಗ್-ಸಿಲ್ಚಾರ್ ಕಾರಿಡಾರ್ ಯೋಜನೆಗೆ ನರೇಂದ್ರ ಮೋದಿ ಅವರು ಶಿಲಾನ್ಯಾಸ ನೆರವೇರಿಸಿದ್ದಾರೆ.
ನಂತರ ಮಾತನಾಡಿದ ಅವರು, ರಸ್ತೆಗಳು, ರೈಲ್ವೆಗಳು ಅಥವಾ ಕಾಲೇಜುಗಳು ಇರಲಿ, ಈ ಪ್ರತಿಯೊಂದು ಯೋಜನೆಗಳು ಬರಾಕ್ ಕಣಿವೆಯನ್ನು ಈಶಾನ್ಯಕ್ಕೆ ಪ್ರಮುಖ ಲಾಜಿಸ್ಟಿಕ್ಸ್ ಮತ್ತು ವ್ಯಾಪಾರ ಕೇಂದ್ರವಾಗಿ ಪರಿವರ್ತಿಸಲು ಸಜ್ಜಾಗಿವೆ ಎಂದು ಅವರು ಹೇಳಿದ್ದಾರೆ. ಪರಿಣಾಮವಾಗಿ, ಇದು ಈ ಪ್ರದೇಶದ ಯುವಕರಿಗೆ ಉದ್ಯೋಗ ಮತ್ತು ಸ್ವ-ಉದ್ಯೋಗಕ್ಕೆ ಲೆಕ್ಕವಿಲ್ಲದಷ್ಟು ಅವಕಾಶಗಳನ್ನು ಸೃಷ್ಟಿಸುತ್ತದೆ. ಈ ವಿವಿಧ ಅಭಿವೃದ್ಧಿ ಯೋಜನೆಗಳಿಗಾಗಿ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ಇದು ಈಶಾನ್ಯ ಭಾರತದ ಮೊದಲ ಪ್ರವೇಶ-ನಿಯಂತ್ರಿತ, ಹಸಿರು ಮೈದಾನ, ನಾಲ್ಕು ಪಥ, ಹೈ-ಸ್ಪೀಡ್ ಕಾರಿಡಾರ್ ಆಗಲಿದೆ. ಸರಿಸುಮಾರು ೧೬೬ ಕಿಲೋಮೀಟರ್ ಉದ್ದದ ಈ ಯೋಜನೆಯನ್ನು ಸುಮಾರು ೨೨,೮೬೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು. ಈ ಕಾರಿಡಾರ್ ಮೇಘಾಲಯ ಮತ್ತು ಅಸ್ಸಾಂ ನಡುವಿನ ಸಂಪರ್ಕವನ್ನು ಸುಧಾರಿಸುತ್ತದೆ.
ಈ ಯೋಜನೆ ಪೂರ್ಣಗೊಂಡ ನಂತರ, ಗುವಾಹಟಿ ಮತ್ತು ಸಿಲ್ಚಾರ್ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ, ಪ್ರಯಾಣದ ಸಮಯವನ್ನು ೮.೫ ಗಂಟೆಗಳಿAದ ಸರಿಸುಮಾರು ೫ ಗಂಟೆಗಳವರೆಗೆ ಕಡಿಮೆ ಮಾಡುತ್ತದೆ. ಈ ಹೈ-ಸ್ಪೀಡ್ ಕಾರಿಡಾರ್ ಈ ಪ್ರದೇಶದಲ್ಲಿ ಆರ್ಥಿಕ ಅಭಿವೃದ್ಧಿಯನ್ನು ವೇಗಗೊಳಿಸುತ್ತದೆ ಮತ್ತು ಗಡಿಯಾಚೆಗಿನ ವ್ಯಾಪಾರವನ್ನು ಹೆಚ್ಚಿಸುತ್ತದೆ ಎಂದು ಸರ್ಕಾರ ಹೇಳುತ್ತದೆ. ಇದು ಪ್ರವಾಸೋದ್ಯಮ, ಕೈಗಾರಿಕೆ ಮತ್ತು ಲಾಜಿಸ್ಟಿಕ್ಸ್ ವಲಯಗಳಿಗೆ ಹೆಚ್ಚು ಪ್ರಯೋಜನವನ್ನು ನೀಡಬಹುದು ಎಂದು ನಂಬಲಾಗಿದೆ.



