ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಆರೋಪಿಯಾಗಿದ್ದಾರೆ. ಈ ಕೇಸ್ನಲ್ಲಿ ಎರಡನೇ ಆರೋಪಿಯಾಗಿರೋ ದರ್ಶನ್ ಬಂಧನವಾಗಿ ಮೂರು ದಿನಗಳಾಗಿವೆ. ಇನ್ನೂ ಈ ಕೊಲೆ ಪ್ರಕರಣದ ತನಿಖೆ ನಡೆಯುತ್ತಿದ್ದು, ಆರೋಪ ಸಾಬೀತಾದರೆ, ದೀರ್ಘ ಅವಧಿವರೆಗೆ ಜೈಲು ಸೇರಬೇಕಾಗುತ್ತೆ. ಹೀಗಾಗಿ ಇವರನ್ನೇ ನಂಬಿರುವ ನಿರ್ಮಾಪಕರಿಗೆ ಆತಂಕ ಶುರುವಾಗಿದೆ.
‘ಕಾಟೇರ’ದಂತಹ ಬ್ಲಾಕ್ ಬಸ್ಟರ್ ಸಿನಿಮಾ ಬಳಿಕ ದರ್ಶನ್ ಸಂಭಾವನೆಯಲ್ಲಿ ಏರಿಯಾಗಿತ್ತು. ಹಾಗೇ ಸಿನಿಮಾಗಳಿಗೆ ಪಡೆಯುವ ಮುಂಗಡ ಹಣವನ್ನೂ ಏರಿಸಿಕೊಂಡಿದ್ದರು ಅನ್ನೋ ಮಾತು ಸಿನಿಮಾ ವಲಯದಲ್ಲಿ ಓಡಾಡುತ್ತಿದೆ. ಹಣದ ವಿಚಾರದಲ್ಲಿ ದರ್ಶನ್ ಕಟ್ಟು ನಿಟ್ಟು. ಒಂದು ರೂಪಾಯಿನೂ ಬಿಡಲ್ಲ. ಒಂದು ಗಂಟೆನೂ ಹೆಚ್ಚು ಕೆಲಸ ಮಾಡಲ್ಲ ಅನ್ನೋದು ದರ್ಶನ್ ಥಿಯೇರಿ ಅಂತ ಹತ್ತಿರದಿಂದ ನೋಡಿದ ಸಿನಿಮಾ ಮಂದಿ ಹೇಳುತ್ತಾರೆ.
ನಿರ್ಮಾಪಕರಿಗೂ ಅಷ್ಟೇ ಸಿನಿಮಾದಲ್ಲಿ ದರ್ಶನ್ ಹೀರೊ ಅಂದರೆ, ನಿರಾಳ. ಯಾಕಂದರೆ, ಸಿನಿಮಾ ಚೆನ್ನಾಗಿ ಮಾಡಿದರೆ, ಥಿಯೇಟರ್ನಲ್ಲಿ ಭರ್ಜರಿ ಕಲೆಕ್ಷನ್ ಆಗುತ್ತೆ ಅನ್ನೋದು ಅವರಿಗೂ ಗೊತ್ತಿದೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಓಟಿಟಿ, ಸ್ಯಾಟಲೈಟ್, ಆಡಿಯೋ ಹಕ್ಕುಗಳು ಕೂಡ ಭರ್ಜರಿ ಬೆಲೆ ಮಾರಾಟ ಆಗುತ್ತೆ. ಡಬ್ಬಿಂಗ್ ಹಕ್ಕುಗಳು ಕೂಡ ಕೋಟಿ ಲೆಕ್ಕದಲ್ಲಿ ಸೇಲ್ ಆಗುತ್ತೆ. ಹೀಗಾಗಿ ಸಿನಿಮಾ ವ್ಯಾಪಾರ ತಲೆ ನೋವಾಗುವುದಿಲ್ಲ ಅನ್ನೋದು ಗೊತ್ತಿರೋದ್ರಿಂದ ಸ್ವಲ್ಪ ಹೆಚ್ಚು ಕಡಿಮೆ ಅಂತ ಮಾತಾಡಿ ಸಿನಿಮಾ ಕೈ ಹಾಕುತ್ತಾರೆ.
ಸದ್ಯಕ್ಕೀಗ ದರ್ಶನ್ ‘ಡೆವಿಲ್’ ಸಿನಿಮಾದಲ್ಲಿ ನಟಿಸುತ್ತಿದ್ದರೂ, ಇಲ್ಲಿಂದ ಮುಂದೆ ನಾಲ್ಕೈದು ಸಿನಿಮಾಗಳ ಬಗ್ಗೆ ಮಾತುಕತೆ ನಡೆದಿರುತ್ತೆ. ತಾರಕ್ ಸಿನಿಮಾ ಬಳಿಕವೇ ಮಿಲನ ಪ್ರಕಾಶ್ ಮತ್ತೊಂದು ಸಿನಿಮಾ ಡೇಟ್ಗೆ ಅಪ್ಲೀಕೇಷನ್ ಹಾಕಿದ್ದರು. ಅದು ಈಗ ಸಿಕ್ಕಿದೆ. ಹೀಗಾಗಿ ಈಗಾಗಲೇ ಅಡ್ವಾನ್ಸ್ ಕೊಟ್ಟು ಕ್ಯೂ ನಿಂತಿರುವ ನಿರ್ಮಾಪಕರ ಪಟ್ಟಿ ದೊಡ್ಡದಿದೆ ಅಂತ ಸುದ್ದಿ ಹಬ್ಬಿದೆ.
ಹಾಗಿದ್ದರೆ, ದರ್ಶನ್ ನಂಬಿ ನಿರ್ಮಾಪಕರು ಹೂಡಿಕೆ ಮಾಡಿದ್ದು ಎಷ್ಟು ಕೋಟಿ? ರಾಬರ್ಟ್’, ‘ಕಾಟೇರ’ ಈ ಎರಡು ಸಿನಿಮಾಗಳು ಸ್ಯಾಂಡಲ್ವುಡ್ ಬಾಕ್ಸಾಫೀಸ್ನಲ್ಲಿ ಹೊಸ ದಾಖಲೆಯನ್ನೇ ಬರೆದಿವೆ. ಇಲ್ಲಿಂದ ದರ್ಶನ್ ಸಿನಿಮಾಗಳಿಗೆ ಹೂಡಿಕೆ ಮಾಡುವ ಬಜೆಟ್ನಲ್ಲೂ ಏರಿಕೆಯಾಗಿದೆ. ಹಾಗೇ ದರ್ಶನ್ ಸಂಭಾವನೆ ಕೂಡ ಹೆಚ್ಚಾಗಿದೆ. ಟಿವಿ9 ವರದಿ ಪ್ರಕಾರ, ದರ್ಶನ್ ಡೆವಿಲ್ ಸಿನಿಮಾಗೆ ಸುಮಾರು 22 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ‘ಡೆವಿಲ್’ ಈಗಾಗಲೇ 25 ದಿನಗಳ ಚಿತ್ರೀಕರಣ ಮುಗಿದಿದೆ.