ಚಿಕ್ಕಬಳ್ಳಾಪುರ: ಜಿಲ್ಲಾ ಮಟ್ಟದ `ಜನತಾ ದರ್ಶನ’ ಕಾರ್ಯಕ್ರಮವನ್ನು ಬಾಗೆಪಲ್ಲಿ ನಗರದಲ್ಲಿ ಮೊದಲ ಬಾರಿಗೆ ಜಿಲ್ಲಾಡಳಿತ ಆಯೋಜಿಸಿದೆ. ಪ್ರತಿ 15 ದಿನಕ್ಕೊಮ್ಮೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ವಿವಿಧ ತಾಲ್ಲೂಕು ಕೇಂದ್ರಗಳಲ್ಲಿ ನಡೆಯುತ್ತಿದೆ, ಸಾರ್ವಜನಿಕರು ಅಲ್ಲಿಯೇ ಅಹವಾಲುಗಳನ್ನು ಸಲ್ಲಿಸಿ ಪರಿಹಾರ ಕಂಡು ಕೊಳ್ಳಬಹುದು ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ. ಸಿ ಸುಧಾಕರ್ ಅವರು ಮನವಿ ಮಾಡಿದರು.
ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಇವರ ಸಂಯುಕ್ತಾಶ್ರಯದಲ್ಲಿ ಬಾಗೆಪಲ್ಲಿ ನಗರದ ಸರ್ಕಾರಿ ಬಾಲಕಿಯರ ಶಾಲಾ ಸಂಕೀರ್ಣದಲ್ಲಿ ಆಯೊಜಿಸಲಾಗಿದ್ದ ಜಿಲ್ಲಾ ಮಟ್ಟದ ಎರಡನೇ ?ಜನತಾ ದರ್ಶನ? ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜನರ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾಡಳಿತವೇ ಜನರ ಬಳಿ ಹೋಗಿ ಜನರ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ, ತಾವು ನೀಡುವ ಅರ್ಜಿಗಳನ್ನು ದಾಖಲು ಮಾಡಿಕೊಂಡು ನಿಗಧಿತ ಸಮಯದೊಳಗೆ ಇತ್ಯರ್ಥಪಡಿಸಲಾಗುತ್ತದೆ ಹಾಗೂ ಅರ್ಜಿ ನೀಡುವವರ ಮೊಬೈಲ್ಗೆ ಸಂದೇಶವು ಸಹ ಬರುವ ವ್ಯವಸ್ಥೆ ಮಾಡಲಾಗಿದೆ ಆದ್ದರಿಂದ ಜನರು ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಹೊರತುಪಡಿಸಿ ಬೇರೆ ಅರ್ಜಿಗಳು ಇದ್ದಲ್ಲಿ ನೀಡಬಹುದಾಗಿದೆ.
ಸರ್ಕಾರದ ಸೂಚನೆ ಮೇರೆಗೆ ನಡೆಯುತ್ತಿರುವ ಈ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರಕಿದೆ. ಸಾರ್ವಜನಿಕರ ಸಮಸ್ಯೆಗಳು, ದೂರುಗಳು, ಅಹವಾಲುಗಳು ಮತ್ತು ಮನವಿಗಳನ್ನು ಸ್ವೀಕರಿಸಿ, `ಜನತಾ ದರ್ಶನ’ ಕಾರ್ಯಕ್ರಮದಲ್ಲೇ ಪರಿಹರಿಸಲು ಪ್ರಯತ್ನ ಮಾಡಲಾಗುತ್ತಿದೆ, ಸ್ಥಳದಲ್ಲೇ ಪರಿಹಾರ ಮಾಡಲು ಸಾಧ್ಯವಾಗದಿದ್ದಲ್ಲಿ ಸಂಬಂಧ ಪಟ್ಟ ಇಲಾಖೆಗೆ ವರ್ಗಾಯಿಸಿ ಕಾಲಮಿತಿಯಲ್ಲಿ ವಿಲೇವಾರಿ ಮಾಡಲಾಗುತ್ತದೆ.
ಈ ವ್ಯವಸ್ಥೆ ಯೋಜಿತ ರೀತಿಯಲ್ಲಿ ಡಿಜಿಟಲ್ ನಿಗಾ ಮೂಲಕ ನಿರ್ವಹಿಸಲಾಗುತ್ತಿದೆ. ಆದ್ದರಿಂದ ಲೋಪ ಜರುಗಲು ಅವಕಾಶ ಇರುವುದಿಲ್ಲ. ಈ ಅರ್ಜಿಗಳನ್ನು ಈಗಾಗಲೇ ಚಾಲ್ತಿಯಲ್ಲಿರುವ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆ (ಐಪಿಜಿಆರ್ಎಸ್-ಇಂಟೆಗ್ರೇಟೆಡ್ ಪಬ್ಲಿಕ್ ಗ್ರಿವಿಯೆನ್ಸ್ ರಿಡ್ರೆಸಲ್ ಸಿಸ್ಟಂ) ತಂತ್ರಾಂಶದಲ್ಲಿ ದಾಖಲಾಗುತ್ತದೆ ಮತ್ತು ಇಲ್ಲಿಂದಲೇ ಸಂಬಂಧಪಟ್ಟ ಇಲಾಖೆಯ ಟೇಬಲ್ಲಿಗೆ ಅರ್ಜಿಗಳ ವಿಲೇವಾರಿಯೂ ನಡೆಯುತ್ತದೆ. ಬಳಿಕ ನಿಗಾವಹಿಸಿ ಕಾಲಮಿತಿಯಲ್ಲಿ ಪರಿಹಾರ ಒದಗಿಸಲು ಕ್ರಮ ವಹಿಸಲಾಗುತ್ತದೆ ಆದ್ದರಿಂದ ಈ ಕಾರ್ಯಕ್ರಮವನ್ನು ಸಾರ್ವಜನಿಕರು ಹೆಚ್ಚಿನ ರೀತಿಯಲ್ಲಿ ಉಪಯೋಗ ಮಾಡಿಕೊಳ್ಳಲು ಅವರು ತಿಳಿಸಿದರು.
ಶಾಸಕರಾದ ಎಸ್. ಎನ್ ಸುಬ್ಬಾರೆಡ್ಡಿ ಅವರು ಮಾತನಾಡಿ, ಮುಖ್ಯಮಂತ್ರಿಗಳ ದೂರದೃಷ್ಟಿಯ ಫಲವಾಗಿ ಬಾಗೆಪಲ್ಲಿ ತಾಲೂಕು ಕೇಂದ್ರದಲ್ಲಿ ಜಿಲ್ಲಾ ಮಟ್ಟದ `ಜನತಾ ದರ್ಶನ’ ಕಾರ್ಯಕ್ರಮವನ್ನು ಅಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಆಯೋಜನೆ ಮಾಡಿರುವ ಈ ಕಾರ್ಯಕ್ರಮದ ಸವಲತ್ತುಗಳನ್ನು ಜನರು ಪಡೆದುಕೊಳ್ಳಬೇಕು. ಬಾಗೆಪಲ್ಲಿ ತಾಲೂಕಿನಲ್ಲಿ ಕಂದಾಯ ಇಲಾಖೆಗೆ ಸಂಬಂಧ ಪಟ್ಟ ಅರ್ಜಿಗಳೇ ಹೆಚ್ಚಾಗಿವೆ, 4500 ಕ್ಕೂ ಹೆಚ್ಚು ಸಾಗುವಳಿ ಅರ್ಜಿಗಳಿದ್ದು, ಅವುಗಳನ್ನು ಇತ್ಯರ್ಥ ಪಡಿಸಲು ಅಧಿಕಾರಿಗಳಿಗೆ ತಿಳಿಸಿದರು
ಇದೆ ವೇಳೆ ಸಾರ್ವಜನಿಕರು ತಮ್ಮ ಸಮಸ್ಯೆಗಳ ಅಹವಾಲುಗಳನ್ನು ಸಚಿವರಿಗೆ ಸಲ್ಲಿಸಿದರು, ಸಭೆಗೆ ಬಂದ ಒಟ್ಟು ಅರ್ಜಿಗಳು : ಜನತಾ ದರ್ಶನದಲ್ಲಿ ಒಟ್ಟು 138 ಅರ್ಜಿಗಳು ಬಂದಿದ್ದು, 59 ಅರ್ಜಿಗಳು ಕಂದಾಯ ಇಲಾಖೆಗೆ ಸಂಬಂಧಿಸಿವೆ. 25 ಅರ್ಜಿಗಳು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿವೆ. ಉಳಿದ ಅರ್ಜಿಗಳು ಸಮುದಾಯಭವನ, ಬೇಸ್ಕಾಂ, ಪಡಿತರ ಚೀಟಿ, ಶಿಕ್ಷಣ ಸೇರಿದಂತೆ ಇತರೆ ಇಲಾಖೆಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಬಂದಿವೆ. ಈ ಎಲ್ಲಾ ಅರ್ಜಿಗಳನ್ನು ಮುಂದಿನ 15 ದಿನಗಳ ಒಳಗಾಗಿ ಇತ್ಯರ್ಥ ಪಡಿಸಲಾಗುತ್ತದೆಂದು ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪಿ. ಎನ್. ರವೀಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಪ್ರಕಾಶ್ ಜಿ. ಟಿ. ನಿಟ್ಟಾಲಿ, ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ರಾಜಾ ಇಮಾಮ್ ಖಾತಿಮ್, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್, ಅಪರ ಜಿಲ್ಲಾಧಿಕಾರಿ ಡಾ|| ಎನ್. ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ಅಶ್ವಿನ್, ತಹಸಿಲ್ದಾರ್ ಪ್ರಾಶಾಂತ್ ಪಾಟೀಲ್ ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಮುಂತಾದವರು ಹಾಜರಿದ್ದರು.