ಮೋಜೋ, ನಾನು ನನ್ ಜಾನು ಸಿನಿಮಾ ನಿರ್ದೇಶಕ ಮನು ಯು.ಬಿ ನಿರ್ದೇಶನದ ಅಖಾಡಕ್ಕೆ ಇಳಿದಿದ್ದಾರೆ.ಕಥೆ ಚಿತ್ರಕಥೆ ಸಂಭಾಷಣೆ ಬರೆದು ಯೂಸ್ ಲೆಸ್ ಫೆಲೋ ಸಿನಿಮಾ ನಿರ್ದೇಶಿಸಿ ನಾಯಕನಾಗಿಯೂ ಬಣ್ಣ ಹಚ್ಚಿದ್ದಾರೆ. ಕಾಣದ ಕಡಲಿಗೆ, ಬ್ರೋಕನ್, ನೆನಪಿದೆಯಾ ಎಂಬ ಕಿರುಚಿತ್ರಗಳನ್ನು ಅವರು ನಿರ್ದೇಶಿಸಿದ್ದರು.
ಒಂದಷ್ಟು ವರ್ಷಗಳ ಕಾಲ ಐಟಿ ಉದ್ಯೋಗಿಯಾಗಿ ಕೆಲಸ ನಿರ್ವಹಿಸಿದ್ದು ಸಿನಿಮಾ ಸೆಳೆತ ಅವರನ್ನು ಚಿತ್ರರಂಗಕ್ಕೆ ಕರೆತಂದು ನಿಲ್ಲಿಸಿದೆ. ನಾಯಕನಾಗಿ ಗಮನಸೆಳೆದಿರುವ ಅವರು ನಿರ್ದೇಶನದಲ್ಲಿ ಛಾಪನ್ನು ಮೂಡಿಸುವ ಎಲ್ಲಾ ಸೂಚನೆ ನೀಡಿದ್ದಾರೆ.ಈಗಾಗಲೇ ಯೂಸ್ ಲೆಸ್ ಫೆಲೋ ಹಾಡಿಗೆ ಭಾರೀ ಮೆಚ್ಚುಗೆ ಸಿಕ್ಕಿದ್ದು, ಇದೀಗ ಎರಡನೇ ಸಾಂಗ್ ಬಿಡುಗಡೆಯಾಗಿದೆ.
ನಾಯಕನ ಗುಣವನ್ನು ವರ್ಣಿಸುವ ಈ ಹಾಡಿಗೆ ನಿರ್ದೇಶಕ ಮನು ಸಾಹಿತ್ಯ ಬರೆದಿದ್ದು, ಕಂಬ್ಳಿಹುಳ ಖ್ಯಾತಿಯ ಶಿವ ಪ್ರಸಾದ್ ಟ್ಯೂನ್ ಹಾಕಿದ್ದು, ಅರ್ಫಾಜ್ ಉಳ್ಳಾಲ್ ಧ್ವನಿಯಾಗಿದ್ದಾರೆ. ಐ ಡೋಂಟ್ ಕೇರ್ ಎನ್ನುತ್ತಾ ನಾಯಕ ಮನು ಹೆಜ್ಜೆ ಹಾಕಿದ್ದಾರೆ.ಲವ್ ಕಂ ಆಕ್ಷನ್ ಕಥಾಹಂದರ ಹೊಂದಿರುವ ಯೂಸ್ ಲೆಸ್ ಫೆಲೋ ಸಿನಿಮಾದಲ್ಲಿ ಮನುಗೆ ಜೋಡಿಯಾಗಿ ದಿವ್ಯಾ ಗೌಡ ನಟಿಸಿದ್ದು, ವಿನೋದ್ ಗೊಬ್ಬರಗಾಲ, ಜೆಕೆ ಮೈಸೂರು, ಸುರೇಶ್ ತಾರಾಬಳಗದಲ್ಲಿದ್ದಾರೆ.
ರಾಜರತ್ನ ಎಂಬ ಪ್ರೊಡಕ್ಷನ್ ಹೌಸ್ ನಡಿ ಮನು ತಾಯಿ ರತ್ನ ಬಸವರಾಜು ಚಿತ್ರ ನಿರ್ಮಾಣ ಮಾಡುತ್ತಿದ್ದು, ಹರಿವು, ಪಿಂಗಾರ ಸಿನಿಮಾಗಳಿಗೆ ರಾಷ್ಟ್ರಪ್ರಶಸ್ತಿ ಪಡೆದಿರುವ ನಿರ್ಮಾಪಕ ಅವಿನಾಶ್ ಶೆಟ್ಟಿ ಸಹ ನಿರ್ಮಾಪಕರಾಗಿ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಶ್ಯಾಮ್ ಸಿಂಧನೂರು ಛಾಯಾಗ್ರಹಣ, ವಿಜಯ್ ಸಿಂದಿಗಿ ಸಂಕಲನ, ಶಿವಪ್ರಸಾದ್ ಸಂಗೀತ ಚಿತ್ರಕ್ಕಿದೆ. ಹಾಸನ, ಸಕಲೇಶಪುರ, ಹುಬ್ಬಳ್ಳಿ, ಮಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಸೆನ್ಸಾರ್ ಪಾಸ್ ಆಗಿರುವ ಯೂಸ್ ಲೆಸ್ ಫೆಲೋ ಸಿನಿಮಾ ಆದಷ್ಟು ಬೇಗ ನಿಮ್ಮ ಮುಂದೆ ಹಾಜರಾಗಲಿದೆ.