ಪ್ರತಿಯೊಬ್ಬರ ಬಯಕೆ ಚಿಕ್ಕದಾದರೂ ಚೊಕ್ಕ ಮನೆ ಕಟ್ಟಬೇಕು, ತಮ್ಮದೇ ಆದ ಸ್ವಂತ ಮನೆಯಲ್ಲಿ ವಾಸ ಮಾಡಬೇಕು ಎನ್ನುವುದು. ಕುಟುಂಬದವರೊಂದಿಗೆ ಸುಖವಾಗಿ ಜೀವನ ನಡೆಸಬೇಕೆಂದು ಕೊಂಡಾಗ ಮನೆಯ ವಾಸ್ತು ಸರಿ ಇರಬೇಕು.
ನಗರ ಪ್ರದೇಶಗಳಲ್ಲಿ ಪೂರ್ಣ ಪ್ರಮಾಣದ ವಾಸ್ತುವನ್ನು ನೋಡಲಾಗದಿದ್ದರೂ, ನೆಮ್ಮದಿಯ ಬದುಕಿಗೆ ಮುಖ್ಯವಾದ ವಾಸ್ತುವಿಗೆ ಸಂಬಂಧಿಸಿದ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಮನೆಯನ್ನು ಕಟ್ಟಿದಾಗ ಅಥವಾ ಕಟ್ಟಿದ ಮನೆ/ಅಪಾರ್ಟ್ ಮೆಂಟ್ ಗಳನ್ನು ತೆಗೆದುಕೊಳ್ಳುವಾಗ ಎಲ್ಲವೂ ಸರಿಯಿದೆಯೇ ಎಂದು ತಿಳಿದುಕೊಂಡಾಗಲೇ ಆಸೆ ಪಟ್ಟಂತಹ ಮನೆಯಲ್ಲಿ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯವಾಗುವುದು.
ದೇವಸ್ಥಾನ/ಗುಡಿ ಗೋಪುರಗಳೆಂದರೆ ಎಲ್ಲರಿಗೂ ಶ್ರದ್ಧೆ ಹಾಗೂ ಭಕ್ತಿಯ ಭಾವ ಹೊಮ್ಮುವುದು. ದೇವಸ್ಥಾನವು ವಾಸಿಸುವ ಮನೆಗಿಂತ 80 /100 ಅಡಿ ದೂರದಲ್ಲಿ ಇರಬೇಕು ಎನ್ನುವುದು ಹಿರಿಯರ ಹಾಗೂ ವಾಸ್ತು ಚಿಂತಕರ ಮಾತು. ನಾವು ವಾಸಿಸುವ “ಮನೆಯ ಮೇಲೆ ದೇವಸ್ಥಾನದ ಗೋಪುರದ ನೆರಳು ಬಿದ್ದರೆ ವಾಸ್ತು ದೋಷ” ಉಂಟಾಗುತ್ತದೆ ಎಂದು ಹೇಳುತ್ತಾರೆ.
ಈ ಅಂಶಗಳನ್ನು ತಿಳಿದುಕೊಂಡಿದ್ದ ಪೂರ್ವಜರು/ಹಿರಿಯರು ದೇವಸ್ಥಾನಗಳನ್ನು ಊರಿನ ಮುಂಭಾಗದಲ್ಲಿ ಅಥವಾ ನದಿ, ಕೆರೆಗಳ ಬಳಿ ವಿಶಾಲವಾಗಿ ನಿರ್ಮಿಸುತ್ತಿದ್ದರು. ಮನೆಗಳನ್ನು ದೇಗುಲದ ತಡೆಗೋಡೆ/ಕಾಂಪೌಂಡಿಗಿಂತ ಹಿಂದೆ ಕಟ್ಟುತ್ತಿದ್ದರು.
ಭಾರತೀಯ ಸಂಸ್ಕೃತಿಯಲ್ಲಿ ವಾಸ್ತುವಿಜ್ಞಾನಕ್ಕೆ ಮಹತ್ವದ ಸ್ಥಾನವಿದೆ.
ಭಾರತೀಯರು ಸಾಮಾನ್ಯವಾಗಿ ವಾಸ್ತು ವಿಚಾರಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ವಾಸ್ತುಶಾಸ್ತ್ರದಲ್ಲಿ ನೆರಳಿಗೂ ಅತ್ಯಂತ ಮಹತ್ವವಿದೆ. ವಾಸ್ತು ಪ್ರಕಾರ ಮನೆಯ ಮೇಲೆ ದೇವಸ್ಥಾನದ ಗೋಪುರದ ನೆರಳು ಬೀಳಬಾರದು. ನೆರಳು ಬಿದ್ದರೆ ಇದರಿಂದ ಸಾಕಷ್ಟು ಕಷ್ಟಗಳು, ನಷ್ಟಗಳು ಉಂಟಾಗುತ್ತವೆ ಎಂದು ಶಾಸ್ತ್ರ ಹೇಳುತ್ತದೆ.
ದೇವಾಲಯದ ಗೋಪುರ ನೆರಳುಗಳು ಮನೆಯ ಮೇಲೆ ಬೀಳುವುದು ಮನೆಯ ಅಭಿವೃದ್ಧಿಗೆ ಶ್ರೇಯಸ್ಕರವಲ್ಲ. ಕೆಲವರು ವಿಧಿ ಇಲ್ಲದೆ ದೇವಸ್ಥಾನದ ಅಕ್ಕಪಕ್ಕವೇ ಮನೆಯನ್ನು ನಿರ್ಮಾಣ ಮಾಡಿಕೊಳ್ಳಬೇಕಾಗುತ್ತದೆ. ಅಥವಾ ಈಗಾಗಲೇ ಮನೆಯು ಇರುತ್ತದೆ ಇಂತಹ ಸಂದರ್ಭದಲ್ಲಿ ಕೆಲವು ಪರಿಹಾರಗಳನ್ನು ಅಥವಾ ನಿಯಮಗಳನ್ನು ಅನುಸರಿಸುವುದು ಬಹಳ ಮುಖ್ಯ.
“ಕಾರಣ ಮತ್ತು ಪರಿಹಾರ”- ದೇವಸ್ಥಾನಗಳಲ್ಲಿ ನಡೆಯುವಂತಹ ಪೂಜೆ, ಪುನಸ್ಕಾರಗಳು, ಹೋಮ ಹವನಾದಿಗಳ ಸಮಯದಲ್ಲಿ ದೇವಾಲಯದಿಂದ ಹೊರಬರುವಂತಹ ಧೂಪ, ಆರತಿ, ಗಂಟೆಯ ನಾದ ಇವು ಗುಡಿಯಲ್ಲಿರುವ ಎಲ್ಲಾ ರೀತಿಯ “ಋಣಾತ್ಮಕ ಶಕ್ತಿ”ಯನ್ನು ಹೊರಹಾಕುತ್ತದೆ. ಈ ಸಮಯದಲ್ಲಿ ಋಣಾತ್ಮಕ ಶಕ್ತಿಗಳು ದೇವಾಲಯದ ಹತ್ತಿರ ಇರುವಂತಹ ಮನೆಗಳಿಗೆ ಪ್ರವೇಶ ಮಾಡುವಂತಹ ಅವಕಾಶ ಇದ್ದು ಇದರಿಂದ ಮನೆಯಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ ಎಂದು ಹೇಳಲಾಗುತ್ತದೆ.
ಇದೇ ಕಾರಣಕ್ಕೆ ದೇವಾಲಯದ ಅಕ್ಕಪಕ್ಕ ಮನೆಗಳು ಇರಬಾರದು. ದೇವಾಲಯದ ನೆರಳು ಮನೆಯ ಮೇಲೆ ಬೀಳಬಾರದು ಎಂದು ಹೇಳುವುದು. ಇನ್ನು ದೇವಾಲಯದ ಬಳಿ ಮನೆಗಳು ಇದ್ದರೆ ಅಥವಾ ಮನೆಯನ್ನು ನಿರ್ಮಾಣ ಮಾಡುವಂತಹ ಪರಿಸ್ಥಿತಿ ಎದುರಾದರೆ ಕೆಲವು ನಿಯಮಗಳನ್ನು ಅನುಸರಿಸಬೇಕು. ಮನೆಯು ದೇವಸ್ಥಾನ ಅಕ್ಕ ಪಕ್ಕದಲ್ಲಿದ್ದರೆ ಆಗ “ಮನೆ ದೇವಸ್ಥಾನದ ಗೋಪುರಕ್ಕಿಂತ ಎತ್ತರ ಇರದಂತೆ ಎಚ್ಚರ ವಹಿಸಬೇಕು. ಮನೆಯ ಮುಂಬಾಗಿಲು/ಮೈನ್ ಡೋರ್ ಸಹ ದೇಗುಲದ ಬಾಗಿಲಿಗಿಂತ ಎತ್ತರದಲ್ಲಿ ಇರಬಾರದು, ಅದೇ ರೀತಿಯಾಗಿ ಮನೆಯ ಪಿಲ್ಲರ್ ಗಳು ಸಹ ಪೂರ್ವ, ಉತ್ತರ ಮತ್ತು ಈಶಾನ್ಯ ದಿಕ್ಕಿನಲ್ಲಿರಬಾರದು ಎಂದು ಹೇಳುತ್ತಾರೆ.
ಮನೆಯ ಮುಖ್ಯದ್ವಾರದ ಮೇಲೆ ದೇವಸ್ಥಾನದ ನೆರಳು ಬೀಳದಂತೆ ಕ್ರಮ ಕೈಗೊಳ್ಳಬೇಕು, ಅದರಲ್ಲೂ ಶಿವ, ಸೂರ್ಯ, ವಿಷ್ಣು ದೇಗುಲದ ಎದುರುಗಡೆಗೆ ಮುಂಬಾಗಿಲು ಇರದಂತೆ ಎಚ್ಚರಿಕೆಯಿಂದ ಮನೆಯ ಪ್ಲಾನ್/ಪೂರ್ವ ತಯಾರಿ ಮಾಡಿಕೊಳ್ಳಬೇಕು. ಬೇರೆ ದಾರಿಯಿಲ್ಲದೆ ದೇವಾಲಯಗಳ ಬಳಿ ಮನೆ ಕಟ್ಟಲೇ ಬೇಕಾದರೆ ಅಥವಾ ಮನೆಗಳು ಇದ್ದರೆ ತಪ್ಪದೇ ಸೂಕ್ತ ನಿಯಮಗಳನ್ನು ಅನುಸರಿಸುವುದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಕಷ್ಟಗಳು ಎದುರಾಗುವುದಿಲ್ಲ ಎಂದು ಹೇಳುತ್ತಾರೆ.
ಚೆಂದದ ಕನಸಿನ ಮನೆಯನ್ನು ವಾಸ್ತು ಪ್ರಕಾರವಾಗಿ ಕಟ್ಟಿ ಕೊಂಡು, ನೆಮ್ಮದಿಯ ಸುಮಧುರ ತಾಣವಾಗಿಸಿಕೊಳ್ಳುವುದು ಅವರವರ ಮನಸ್ಸಿನ ಮೇಲೆಯೇ ಅವಲಂಬಿಸಿರುತ್ತದೆ. ದೇವರು, ದೈವ, ಧರ್ಮ, ಶಾಸ್ತ್ರ, ಸಂಪ್ರದಾಯ ಹಾಗೂ ಸಂಸ್ಕೃತಿಯನ್ನು ಪಾಲಿಸಿ ಮುಂದಿನ ಪೀಳಿಗೆಗೂ ತಿಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.
-ಡಾ.ಆರ್.ಶೈಲಜ ಶರ್ಮ, ಬೆಂಗಳೂರು