ದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ದಾಖಲಾಗಿದ್ದ ಎಫ್ಐಆರ್ ವಿಚಾರಣೆ ಸಂಬಂಧ ವಿಚಾರಣೆಗೆ ತಡೆ ನೀಡಿ ಸುಪ್ರೀಂಕೋರ್ಟ್ ಆದೇಶಿಸಿದೆ.
ರಸ್ತೆ ತಡೆದು ಪ್ರತಿಭಟನೆ ನಡೆಸಿ ಸಾರ್ವಜನಿಕರಿಗೆ ತೊಂದರೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ವಿಧಿಸಿರುವ 10 ಸಾವಿರ ರೂ. ದಂಡವನ್ನು ಪ್ರಶ್ನಿಸಿ ಮತ್ತು ಎಫ್ಐಆರ್ ರದ್ದತಿ ಕೋರಿ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ನಡೆಸಿತು.
ಮುಂದಿನ ಆದೇಶದವರೆಗೆ ವಿಚಾರಣೆಗೆ ತಡೆ ನೀಡಿ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಇದರೊಂದಿಗೆ ಸಿದ್ದರಾಮಯ್ಯ ಹಾಗೂ ಇತರ ಕಾಂಗ್ರೆಸ್ ನಾಯಕರು ತುಸು ನಿರಾಳರಾಗುವಂತಾಗಿದೆ. ಆದರೆ, ಆರು ವಾರಗಳ ಒಳಗಾಗಿ ಪ್ರತಿಕ್ರಿಯೆ ನೀಡುವಂತೆ ಸರ್ವೋಚ್ಚ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ರಸ್ತೆ ತಡೆದು ಪ್ರತಿಭಟನೆ ನಡೆಸಿ ಸಾರ್ವಜನಿಕರಿಗೆ ತೊಂದರೆ ನೀಡಿದ ಆರೋಪಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಎಫ್ಐಆರ್ ರದ್ದು ಮಾಡಬೇಕೆಂದು ಕೋರಿ ಸುಪ್ರೀಂ ಕೋರ್ಟ್ನಲ್ಲಿ ಕೆಲವು ದಿನಗಳ ಹಿಂದೆ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕ ಹೈಕೋರ್ಟ್ 10 ಸಾವಿರ ರೂ. ದಂಡ ವಿಧಿಸಿರುವುದನ್ನು ಕೂಡ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಹಾಗೂ ಕಾಂಗ್ರೆಸ್ ನಾಯಕರ ಪರ ಅಭಿಷೇಕ್ ಮನುಸಿಂಘ್ವಿ ವಾದ ಮಂಡನೆ ಮಾಡಿದರು.ಕಾಂಗ್ರೆಸ್ ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಇದೊಂದು ಶಾಂತಿಯುತ ಪ್ರತಿಭಟನೆಯಾಗಿತ್ತು. ಪ್ರತಿಭಟನೆಯಿಂದ ಯಾವುದೇ ರೀತಿಯ ಸಮಸ್ಯೆಯಾಗಿರಲಿಲ್ಲ. ಇದು ರಾಜಕೀಯ ಪ್ರತಿಭಟನೆ ಎಂದು ಕಪಿಲ್ಸಿಬಲ್ ವಾದ ಮಂಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ರಾಜಕೀಯ ಪಕ್ಷಗಳ ಪ್ರತಿಭಟನೆ ಎಂದ ಕೂಡಲೆ ಕೇಸ್ ವಜಾ ಮಾಡಬೇಕೇ ಏಂದು ಪ್ರಶ್ನಿಸಿತು. ಜತೆಗೆ, ನೀವು ಪ್ರತಿಭಟನೆಗೆ ಅನುಮತಿ ಪಡೆದಿದಿದ್ದಿರೇ ಎಂದು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಸಿಬಲ್, ಪ್ರತಿಭಟಿಸುವುದು ಮೂಲಭೂತ ಹಕ್ಕು. ಪ್ರತಿಭಟಿಸುವುದು ಅಪರಾಧವಲ್ಲ ಎಂದು ವಾದ ಮಂಡಿಸಿದರು.
ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ, ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ಅವರ ರಾಜಿನಾಮೆ ಆಗ್ರಹಿಸಿ 2022ರ ಏಪ್ರಿಲ್ 14 ರಂದು ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿ ಸಿದ್ದರಾಮಯ್ಯ, ಸಚಿವ ಎಂಬಿ ಪಾಟೀಲ್ ಸೇರಿದಂತೆ ಕಾಂಗ್ರೆಸ್ನ ನಾಯಕರು ಮತ್ತು ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದ್ದರು. ಈ ವೇಳೆ ರಸ್ತೆ ತಡೆಯಾಗಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಾಹನ ಸಾವರರು ಪರದಾಡುವಂತಾಗಿತ್ತು.