ಬೆಂಗಳೂರು: ರಾಜ್ಯ ಬಿಜೆಪಿ ಪಾಳಯದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರುತ್ತಿದ್ದು, ಇಂದು ವರಿಷ್ಠರ ಕರೆಯ ಮೇರೆಗೆ ಮೂವರು ಮುಖಂಡರು ದೆಹಲಿಗೆ ಪ್ರಯಾಣ ಬೆಳೆಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ರಾಜ್ಯದ ಪಕ್ಷದ ಪ್ರಮುಖರಾದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ ಮತ್ತು ಸಂಸದ ಪಿ.ಸಿ. ಮೋಹನ್ ಅವರು ಇಂದು ಬೆಳಿಗ್ಗೆ ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ.ಇಂದು ಬೆಳಿಗ್ಗೆ 9.45ರ ಸುಮಾರಿಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನನಿಲ್ದಾಣದಿಂದ ಈ ಮೂವರು ನಾಯಕರು ಪ್ರಯಾಣ ಬೆಳೆಸಿದ್ದು, ಮಧ್ಯಾಹ್ನ 3.30ರ ಸುಮಾರಿಗೆ ದೆಹಲಿಯ ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ದೆಹಲಿಗೂ ಪ್ರಯಾಣ ಬೆಳೆಸುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿರುವ ಮಾಜಿ ಸಚಿವ ಈಶ್ವರಪ್ಪ ಅವರು, ಪಕ್ಷದ ವರಿಷ್ಠರ ಕರೆಯ ಮೇರೆಗೆ ತಾವುಗಳು ದೆಹಲಿಗೆ ತೆರಳುತ್ತಿದ್ದು ಮಧ್ಯಾಹ್ನ 3.30ಕ್ಕೆ ನಡೆಯುವ ಸಭೆಯಲ್ಲಿ ಭಾಗಿಯಾಗುವಂತೆ ಸೂಚನೆ ನೀಡಲಾಗಿದೆ. ತಮ್ಮನ್ನು ಯಾವ ವಿಷಯಕ್ಕೆ ಹಾಗೂ ಯಾವುದರ ಬಗ್ಗೆ ಮಾತನಾಡಲು ಕರೆದಿದ್ದಾರೆ ಎಂಬುದು ತಿಳಿದಿಲ್ಲ. ಸಭೆ ನಡೆದು ಚರ್ಚೆಯಾದ ನಂತರ ಬಂದು ಎಲ್ಲಾ ವಿಷಯ ತಿಳಿಸುತ್ತೇನೆ ಎಂದಿದ್ದಾರೆ.
ಕಳೆದವಾರವಷ್ಟೇ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರನ್ನು ದೆಹಲಿಗೆ ಕರೆಸಿದ್ದ ಪಕ್ಷದ ವರಿಷ್ಠರು ಅವರೊಂದಿಗೆ ಮಾತನಾಡದೆ ವಾಪಸ್ ಕಳಿಸಿದ್ದರು. ಇದೀಗ ಹಿಂದುಳಿದ ಸಮುದಾಯಕ್ಕೆ ಸೇರಿದ ಮೂವರು ಪಕ್ಷದ ಮುಖಂಡರನ್ನು ದೆಹಲಿಗೆ ಬರಮಾಡಿಕೊಂಡಿರುವುದು ಪಕ್ಷದಲ್ಲಿ ತೀವ್ರ ಸಂಚಲನ ಮೂಡಿಸಿದೆ.