ನೆಲಮಂಗಲ: “12 ಯೋಜನೆ ವಿಸ್ತಾರದ, 60 ಲಕ್ಷ ಜನಸಂಖ್ಯೆಯ ಕಲ್ಯಾಣ ನಗರದ ರಾಜ ಬಿಜ್ಜಳನ ಆಸ್ಥಾನದಲ್ಲಿ ಅನುಭಾವ ಮಂಟಪವನ್ನು ಸ್ಥಾಪಿಸಿ, ಎಲ್ಲಾ ಜಾತಿಗಳ ಎಲ್ಲಾ ವೃತ್ತಿಗಳ ಜನರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ವೇದಿಕೆಯನ್ನು ಕಲ್ಪಿಸಿ, ಅವರಿಂದ ವಚನಗಳನ್ನು ಬರೆಸಿ, ಶ್ರೇಷ್ಠ ಶರಣ ಪರಂಪರೆಯೊಂದನ್ನು ರೂಪಿಸಿದ ಬಸವಣ್ಣನವರು ಜಗತ್ತು ಕಂಡ ಮಹಾನ್ ಕ್ರಾಂತಿಕಾರಿ.
770 ಅಮರಗಣಂಗಳು, 3,000 ವಿರಕ್ತರು, 12,000 ಷಟ್ ಸ್ಥಳ ಬ್ರಹ್ಮಗಳು ಮತ್ತು 1,96,000 ಶರಣರು ಬಸವಣ್ಣನವರ ಜೊತೆ ಇದ್ದರೆಂದರೆ ಅವರ ಸಾಧನೆಯ ಶಿಖರದ ಅಗಾಧತೆಯ ಅರಿವಾಗುತ್ತದೆ. ಈ ಎಲ್ಲಾ ಶರಣರಿಂದ ರೂಪುತಳೆದ ವಚನ ಸಾಹಿತ್ಯ ಜಗತ್ತು ಕಂಡ ಶ್ರೇಷ್ಠ ಸಾಹಿತ್ಯವಾಗಿದೆ” ಎಂದು ಲೇಖಕ ಚಿಂತಕ ಮಣ್ಣೆ ಮೋಹನ್ ತಿಳಿಸಿದರು. ಅವರು ತಾಲೂಕಿನ ದೇವರಹೊಸಹಳ್ಳಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಏರ್ಪಡಿಸಿದ್ದ “ಶಾಲೆಯಿಂದ ಶಾಲೆಗೆ ಕನ್ನಡ ರಾಜ್ಯೋತ್ಸವ 50ರ ಸಂಭ್ರಮ” ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿ ಮಾತನಾಡುತ್ತಿದ್ದರು.
ಮುಂದುವರೆದ ಮಾತನಾಡಿದ ಅವರು “ಕಲ್ಯಾಣ ಕ್ರಾಂತಿಯ ಸಮಯದಲ್ಲಿ ಚನ್ನಬಸವಣ್ಣ ಮತ್ತು ಮಡಿವಾಳ ಮಾಚಿದೇವರು ವಚನಗಳ ಕಟ್ಟನ್ನು ಸಂರಕ್ಷಿಸಿ, ಅವುಗಳನ್ನು ಉಳವಿಗೆ ಸಾಗಿಸಿ, ನಮಗೆ ವಚನ ಸಾಹಿತ್ಯ ಉಳಿಯುವಂತೆ ಮಾಡಿದರು. ಶಿವಶರಣರು ತಮ್ಮ ಪ್ರಾಣ ಒತ್ತೆಯಿಟ್ಟು ವಚನ ಸಾಹಿತ್ಯವನ್ನು ಉಳಿಸಿದರು.
ಕಲ್ಯಾಣ ಕ್ರಾಂತಿಯು, ವಚನ ಶರಣರನ್ನು ವೀರ ಶರಣರನ್ನಾಗಿಸಿತು. ನಾವು ಅವರಿಗೆ ಚಿರಋಣಿಯಾಗಿರಬೇಕು. ಹಾಗೆಯೇ ಶಿವಶರಣರಂತೆ ಇಂದಿನ ಮಕ್ಕಳು ಸಾಹಿತ್ಯ, ಸಂಗೀತ, ಕಲೆ ಇವುಗಳನ್ನು ಮೈಗೂಡಿಸಿಕೊಳ್ಳಬೇಕು. ಅದಕ್ಕಾಗಿ ತಾಲೂಕು ಕಸಾಪ ವತಿಯಿಂದ ಹಳ್ಳಿ ಹಳ್ಳಿಗಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ನಾಡಿಗೆ ಪರಿಚಯಿಸಲಾಗುವುದು ಎಂದರು.
ತಾಲ್ಲೂಕು ಕಸಾಪ ಅಧ್ಯಕ್ಷರಾದ ಬಿ ಆರ್ ಪ್ರದೀಪ್ ಕುಮಾರ್ ಅವರು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿಕರ್ನಾಟಕ ಏಕೀಕರಣ ಹೋರಾಟದ ಮಹನೀಯರನ್ನು ನೆನೆಯುತ್ತಾ, ತಾಲೂಕಿನಲ್ಲಿಯೂ ಕನ್ನಡವನ್ನು ಕಟ್ಟಿದ ಮಹನೀಯರನ್ನು ನೆನೆಯುತ್ತಾ, ಮೈಸೂರು ರಾಜ್ಯದ ಉದಯ ಮತ್ತು ಆನಂತರ ಕರ್ನಾಟಕವೆಂದು ಹೆಸರಾದ ನಂತರದ ನಾಡು ನುಡಿಯ ಬೆಳವಣಿಗೆಯನ್ನು ಸವಿಸ್ತಾರವಾಗಿ ವಿವರಿಸಿದರು.
ತಾಲ್ಲೂಕು ಕಸಾಪ ಗೌರವ ಕಾರ್ಯದರ್ಶಿ ಬಿ ಪ್ರಕಾಶ್ ಮೂರ್ತಿ ಅವರು ಮಾತನಾಡಿ “ಈ ನಮ್ಮ ಶಾಲೆಯು ನೆಲಮಂಗಲ ತಾಲೂಕಿನ ಗಡಿಭಾಗದಲ್ಲಿದ್ದರೂ ಒಳ್ಳೆಯ ವಾತಾವರಣವನ್ನು ಹೊಂದಿದೆ. ವೀರಭದ್ರ ಸ್ವಾಮಿಯ ತಪ್ಪಲಲ್ಲಿ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಲು ಈ ಶಾಲೆಯ ಮುಖ್ಯಶಿಕ್ಷಕರು ಬಹಳ ಶ್ರಮ ವಹಿಸುತ್ತಿದ್ದಾರೆ. ಅಲ್ಲದೆ ಮಕ್ಕಳು ತಾಯಿ ತಂದೆಗೆ ಗೌರವ ಕೊಡುವಂತೆ ಕನ್ನಡ ಭಾಷೆಗೂ ಗೌರವ ಕೊಡಬೇಕು. ಪ್ರತಿಯೊಬ್ಬರೂ ಭಾಷೆಯನ್ನು ಪ್ರೀತಿಸಬೇಕು” ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕರಾದ ಡಿ ಎಸ್ ಸೋಮಶೇಖರಯ್ಯ ಅವರು ಮಾತನಾಡಿ “ಪ್ರಪಂಚದ 10 ಶ್ರೇಷ್ಠ ಸಾಹಿತಿಗಳಲ್ಲಿ ಭಾರತದ ವಾಲ್ಮೀಕಿ, ವೇದವ್ಯಾಸ ಮತ್ತು ಕಾಳಿದಾಸರು ಸೇರಿದ್ದಾರೆ. ಹಾಗೆಯೇ ಕನ್ನಡದಲ್ಲಿ ಎಂಟು ಜನ ಕವಿಗಳು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದು ಕನ್ನಡ ಭಾಷೆಯ ಕೀರ್ತಿ ಪತಾಕೆ ಹಾರಿಸಿದ್ದಾರೆ” ಎಂದು ಕನ್ನಡದ ಹಿರಿಮೆಯನ್ನು ಕೊಂಡಾಡಿದರು. ಮಕ್ಕಳಿಗೆ ಧ್ಯಾನ, ಶ್ಲೋಕದ ಮಹತ್ವವನ್ನು ತಿಳಿಸುವುದರ ಮೂಲಕ ಸಾಹಿತಿ ಸದಾನಂದಾರಾಧ್ಯರು ಮಕ್ಕಳ ಮನೆಗೆದ್ದರು. ತಾಲೂಕು ರೈತ ಹಿತರಕ್ಷಣ ಸಮಿತಿಯ ಕಾರ್ಯದರ್ಶಿ ಕೆ.ಸಿ ರಮೇಶ್ ಅವರು ಮಾತನಾಡಿ, ಅನೇಕ ರೈತ ಪರ ಹೋರಾಟ ಮತ್ತು ಕನ್ನಡ ಪರ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ತಮ್ಮ ಅನುಭವಗಳನ್ನು ಮೆಲುಕು ಹಾಕಿದರು. ಕನ್ನಡ ಶಿಕ್ಷಕರಾದ ಕಾಂತರಾಜುರವರು ಮಾತನಾಡಿ ಕನ್ನಡ ನಾಡು ನುಡಿಯ ಮಹತ್ವದ ಬಗ್ಗೆ ಮಕ್ಕಳಿಗೆ ತಿಳಿಸಿದರು.
ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಮೂಲಕ ಮತ್ತು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಶಾಲಾ ಮಕ್ಕಳು ನಾಡಗೀತೆ ಹಾಡಿದರು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಕನ್ನಡದ ಮೇರು ನಟಿ ಲೀಲಾವತಿರವರಿಗೆ ಮೌನಾಚರಣೆ ಮೂಲಕ ಶ್ರಧ್ದಾಂಜಲಿ ಅರ್ಪಿಸಲಾಯಿತು. ಕವನ ರಚನೆ, ಪ್ರಬಂಧ ರಚನೆ, ಗೀತ ಗಾಯನ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಸಾಹಿತಿ ಶಿರಾಜ್ ಅಹಮದ್, ಪ್ರೇಮ್ ಕುಮಾರ್, ಸೋಂಪುರ ಹೋಬಳಿಯ ಅಧ್ಯಕ್ಷರಾದ ಶ್ರೀಕಾಂತ್, ನಗರಘಟಕದ ಅಧ್ಯಕ್ಷ ಮಲ್ಲೇಶ್, ರಂಗ ಕಲಾವಿದ ಕೃಷ್ಣಯ್ಯ, ರುದ್ರೇಶ್, ಕೆ.ಜಿ ಕುಮಾರ್, ಕುಮಾರಿ ವರ್ಷ, ಶಿಕ್ಷಕಿ ಲಕ್ಷ್ಮಿ ಪ್ರಿಯದರ್ಶಿನಿ, ಶಿಕ್ಷಕರಾದ ನಾಗನಾಯ್ಕ , ಜಗದೀಶ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಘು ಟಿ ಎಸ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಹಿರಿಯ ಶಿಕ್ಷಕಿ ನಾಗರತ್ನಮ್ಮ ರವರು ಸ್ವಾಗತ ಕೋರಿದರು. ರಂಗಶಾಮಯ್ಯ ನವರು ವಂದನಾರ್ಪಣೆ ನೆರವೇರಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.