ಚಿಕ್ಕಬಳ್ಳಾಪುರ: ಸಂತ ಕವಿ ಸರ್ವಜ್ಞ ರಾಷ್ಟ್ರ ಕಂಡ ಶ್ರೇಷ್ಠ ತತ್ವಜ್ಞಾನಿ, ತಮ್ಮ ತ್ರಿಪದಿಗಳ ಮೂಲಕ ವಚನ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ, ಅವರ ಕೊಡುಗೆಗಳು ಒ೦ದು ವರ್ಗಕ್ಕೆ ಸೀಮಿತವಲ್ಲ ಎಂದು ತಹಸೀಲ್ದಾರ್ ರಶ್ಮಿ ಅವರು ಅಭಿಪ್ರಾಯ ಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಶುಕ್ರವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ “ಶ್ರೀ ಸಂತಕವಿ ಸರ್ವಜ್ಞ ಜಯಂತಿ” ಕಾರ್ಯಕ್ರಮದಲ್ಲಿ ಸರ್ವಜ್ಞರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಸರ್ವಜ್ಞರು ವಚನಗಳನ್ನು ಆಡು ಮಾತಿನ ರೂಪದಲ್ಲಿ. ಸರಳವಾಗಿ ಜನರ ಆಡುಭಾಷೆಯಲ್ಲೇ ತ್ರಿಪದಿಗಳನ್ನು ರಚಿಸಿ ಸಮಾಜದ ಅಂಕುಡೊಂಕುಗಳನ್ನು ತಿದ್ದಿದ ಸಮಾಜ ಸುಧಾರಕರು.ಮಹಾತ್ಮ ಗಾಂಧಿ ಮತ್ತು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗಿಂತಲೂ ಮುಂಚೆಯೆ ಜಾತಿ ಪದ್ದತಿಯನ್ನು ಕಟುವಾಗಿ ವಿರೋಧಿಸಿ ೧೬ನೇ ಶತಮಾನದಲ್ಲೆ ಜಾಗೃತಿ ಮೂಡಿಸಿದವರು ಸರ್ವಜ್ಞರು. ಅವರು ರಚಿಸಿರುವ ತ್ರಿಪದಿಗಳು ಸರಳತೆ ಮತ್ತು ಪ್ರಾಸಬದ್ಧತೆಯಲ್ಲಿ ಜನಪ್ರಿಯವಾಗಿವೆ, ಮುಖ್ಯವಾಗಿ ನೈತಿಕ, ಸಾಮಾಜಿಕ ಮತ್ತು ಧಾರ್ಮಿಕ ವಿಷಯಗಳನ್ನು ಸರಿಯಾದ ದಿಕ್ಕಿನಲ್ಲಿ ತಿಳಿಸಿದ್ದಾರೆ. ಸರ್ವಜ್ಞನ ಒಂದೊಂದು ವಚನವೂ ಬದುಕಿನ ವಿವಿಧ ವಿಚಾರಗಳಿಗೆ ಕನ್ನಡಿ ಹಿಡಿಯಲಿವೆ, ಅಷ್ಟು ವಾಸ್ತವ ಮತ್ತು ನೈಜತೆಯಿಂದ ಕೂಡಿವೆ. ಪ್ರತಿಯೊಬ್ಬರು ಸರ್ವಜ್ಞರ ವಚನಗಳನ್ನು ಹಾಗೂ ಕಾಯಕದ ಮಹತ್ವ, ತತ್ತ್ವಗಳು, ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅದನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯೋಪಧ್ಯಾಯ ಶಿವಯ್ಯ ರವರು ಮಾತನಾಡಿ, ಸರ್ವಜ್ಞನನ್ನು ತ್ರಿಪದಿಯ ಬಹ್ಮ ಎಂದೆ ಕರೆಯುತ್ತೆವೆ. ತಮಿಳಿನ ತಿರುವಾಳ್ವಾರ್ ರವರು, ತೆಲುಗಿನ ವೇಮನರಂತೆ ಕನ್ನಡದಲ್ಲಿ ಸರ್ವಜ್ಞನನ್ನು ಕಾಣಲಾಗುತ್ತದೆ. ಸತ್ಯನಿಷ್ಠುರವಾದ ಸಾಮಾಜಿಕ ಕಳಕಳಿಯಿಂದ ಸರಳಸುಂದರವಾದ ಅಚ್ಚಗನ್ನಡದಲ್ಲಿ ರಚಿತವಾದ ಸರ್ವಜ್ಞ ರವರ ವಚನಗಳು ಸರ್ವ ಕಾಲಕ್ಕೂ ಉಪದೇಶಾತ್ಮಕವಾಗಿವೆ. ಒಂದೊAದು ತ್ರಿಪದಿಯೂ ನೂರಾರು ಪುಟಗಳ ವ್ಯಾಖ್ಯಾನಗಳನ್ನು ವಿಶ್ಲೇಷಣೆ ಮಾಡುತ್ತದೆ. ಅವುಗಳಲ್ಲಿ ಇಲ್ಲದ ವಿಷಯಗಳಿಲ್ಲ. ಮಾನವ ಬದುಕಿನ ಹುಟ್ಟಿನಿಂದ ಸಾವಿನವರೆಗಿನ ಏಳುಬೀಳುಗಳಿಗೆ ಕಾರಣವಾಗುವ ವಿಚಾರಗಳೊಂದಿಗೆ, ಜ್ಞಾನ, ವಿಜ್ಞಾನ. ವೈದ್ಯ, ಜ್ಯೋತಿಷ್ಯ ಮುಂತಾದ ಸಾವಿರಾರು ವಿಷಯಗಳು ಇಲ್ಲಿ ರೂಪುತಾಳಿವೆ ಎಂದರು.
ಸಮುದಾಯದ ವಿದ್ಯಾರ್ಥಿಗಳಿಗೆ ಹಾಗೂ ಸಮುದಾಯದ ಹಿರಿಯ ಮುಖಂಡರಿಗೆ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ. ರವಿಕುಮಾರ್, ಸಮುದಾಯದ ಮುಖಂಡರಾದ ನಾರಾಯಣಸ್ವಾಮಿ, ಚಿಕ್ಕರೆಡ್ಡಪ್ಪ, ಲಕ್ಷ್ಮಿವೆಂಕಟಪ್ಪ, ಶ್ರೀಧರ್, ಕಲಾವಿಧ ನಾರಾಯಣಸ್ವಾಮಿ, ಸಮುದಾಯದ ವಿವಿಧ ಸಂಘಗಳ ಸದಸ್ಯರು, ಪದಾಧಿಕಾರಿಗಳು, ಜನ ಪ್ರತಿನಿಧಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ಸರ್ವಜ್ಞನ ವಚನಗಳು ಒಂದು ವರ್ಗಕ್ಕೆ ಸೀಮಿತವಲ್ಲ: ತಹಸೀಲ್ದಾರ್ ರಶ್ಮಿ



