ಚಳ್ಳಕೆರೆ: ಚಳ್ಳಕೆರೆಯಲ್ಲಿ ‘ಕರಿಮಲೆಯಿಂದ ಕೊಂಕಿ ಜರಮಲೆವರೆಗೆ’ ಕೃತಿ ಲೋಕಾರ್ಪಣೆ. 13 ವರ್ಷಗಳಿಂದ ನಾನು ಶಾಸಕನಾಗಿ ಕಾಡುಗೊಲ್ಲ ಬುಡಕಟ್ಟು ಜನರ ಮುಗ್ಧತೆ ಹಾಗೂ ಅವರ ವಿಶಿಷ್ಟ ಸಾಂಸ್ಕೃತಿಕ ಆಚರಣೆಗಳನ್ನು ಬಹಳ ಹತ್ತಿರದಿಂದ ಕಂಡಿದ್ದೇನೆ. ಈ ಕೃತಿಯು ಅವರ ವಿಶಿಷ್ಟ ಬದುಕನ್ನು ಸಮಾಜಕ್ಕೆ ಪರಿಚಯಿಸುವಲ್ಲಿ ಮಹತ್ವದ ಕೆಲಸ ಮಾಡಿದೆ ಎಂದು ಶಾಸಕ ಹಾಗೂ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ. ರಘುಮೂರ್ತಿ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹುಣ್ಣಿಮೆ ಪ್ರಕಾಶನದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ, ಕತೆಗಾರ ಹಾಗೂ ಜಾನಪದ ವಿದ್ವಾಂಸ ಡಾ. ಜಿ.ವಿ. ಆನಂದಮೂರ್ತಿ ಅವರು ರಚಿಸಿ ರುವ ‘ಕರಿಮಲೆಯಿಂದ ಕೊಂಕಿ ಜರಮಲೆವರೆಗೆ (ಕಾಡುಗೊಲ್ಲರ ಸಾಂಸ್ಕೃತಿಕ ಆಚರಣೆಗಳು)’ ಕೃತಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಪ್ರಸಿದ್ಧ ಲೇಖಕ ಹಾಗೂ ಚಿಂತಕ ಬಂಜಗೆರೆ ಜಯಪ್ರಕಾಶ್, ಸಂಖ್ಯಾತ್ಮಕವಾಗಿ ಕಾಡುಗೊಲ್ಲ ಸಮುದಾಯ ದೊಡ್ಡ ಪ್ರಮಾಣದಲ್ಲಿ ಇಲ್ಲದೇ ಇರಬಹುದು, ಆದರೆ ಸಾಂಸ್ಕೃತಿಕ ಹಾಗೂ ಚಾರಿತ್ರಿಕ ಹಿನ್ನೆಲೆಯಿಂದ ಈ ಬುಡಕಟ್ಟಿಗೆ ಕರ್ನಾಟಕದಲ್ಲಿ ಅನನ್ಯ ಸ್ಥಾನವಿದೆ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕದ ಸಮಾಜಕ್ಕೆ ಹಲವು ಬಗೆಯ ಪಶು ಹಾಗೂ ಕುರಿ ತಳಿಗಳ ನ್ನು ಪರಿಚಯಿಸಿ, ಬೆಳೆಸಿಕೊಂಡು ಬಂದಿರುವ ವಿಶಿಷ್ಟ ಬುಡಕಟ್ಟು ಇದಾಗಿದೆ. ಲೇಖಕರು ಪಶು ಸಂಗೋಪನೆಗಾಗಿ ಸಮುದಾಯ ಸವೆಸುವ ಕಾಲ್ನಡಿಗೆಯ ಹಾದಿ, ಅವರ ಕಷ್ಟ-ಕಾರ್ಪಣ್ಯಗಳು ಹಾಗೂ ದೈವಗಳ ವಿಶಿಷ್ಟ ಆಚರಣೆಗಳನ್ನು ಅತ್ಯಂತ ಅಚ್ಚುಕಟ್ಟಾಗಿ ದಾಖಲಿಸಿದ್ದಾರೆ ಎಂದು ಶ್ಲಾಘಿಸಿದರು.
ಈ ಕೃತಿಯು ‘ಕಾಡುಗೊಲ್ಲ’ ಬುಡಕಟ್ಟು ಸಮುದಾಯದ ಸಾಂಸ್ಕೃತಿಕ ಆಚರಣೆಗಳು ಮತ್ತು ಜೀವನ ಕ್ರಮದ ಬಗ್ಗೆ ಆಳವಾದ ಅಧ್ಯಯನವ ನ್ನು ಒಳಗೊಂಡಿದೆ. ಲೇಖಕ ಡಾ. ಜಿ.ವಿ. ಆನಂದಮೂರ್ತಿ ಅವರು ಸರಿ ಸುಮಾರು 10 ವರ್ಷಗಳ ಕಾಲ ರಾಜ್ಯಾದ್ಯಂತ ಸಂಚರಿಸಿ ಕ್ಷೇತ್ರಕಾರ್ಯ ನಡೆಸಿದ್ದಾರೆ. ಸ್ವತಃ ಆ ಸಮುದಾಯದವರೊಂದಿಗೆ ಬೆರೆತು, ಊಟ ಮಾಡಿ, ಕುರಿಗಾಹಿಗಳ ಕಾಲನಡಿಗೆಯ ಪಯಣದಲ್ಲಿ ಸಾಗಿ ಈ ಕೃತಿಯನ್ನು ಕಟ್ಟಿಕೊಟ್ಟಿದ್ದಾರೆ. ಕ್ಯಾಮೆರಾದೊಂದಿಗೆ ತೆರಳಿ ದೈವದ ಗುಬ್ಬಗಳು (ದೇವರ ಗುಡಿಗಳು) ಮತ್ತು ಜಾತ್ರೆಗಳ ಅಪರೂಪದ ಛಾಯಾಚಿತ್ರಗಳನ್ನು ಸೆರೆಹಿಡಿದಿರುವುದು ಕೃತಿಗೆ ಮತ್ತಷ್ಟು ಜೀವಂತಿಕೆ ನೀಡಿದೆ. ಚಿತ್ರದುರ್ಗ, ತುಮಕೂರು, ಬಳ್ಳಾರಿ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಹೆಚ್ಚಾಗಿ ನೆಲೆಸಿ ರುವ ಈ ಸಮುದಾಯದ ಬದುಕನ್ನು ಇದು ಅನಾವರಣಗೊಳಿಸಿದೆ.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ,82 ವರ್ಷದ ಹಿರಿಯರಾದ ಕೋಲಾಟದ ನರಸಪ್ಪ ಮತ್ತು ಸಿರಿಯಮ್ಮ ಅವರು ವೇದಿಕೆ ಮೇಲೆ ಪ್ರಸ್ತುತಪಡಿಸಿದ ಅದ್ಭುತವಾದ ಜಾನಪದ ಗಾಯನವು ಸೇರಿದ್ದ ಎಲ್ಲರ ಗಮನ ಸೆಳೆಯುವ ಮೂಲಕ ಕಾರ್ಯಕ್ರಮಕ್ಕೆ ಜಾನಪದೀಯ ಮೆರುಗು ನೀಡಿತು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಜಾನಪದ ವಿದ್ವಾಂಸರಾದ ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ ಮತ್ತು ಪ್ರೊ.ಹೊನ್ನಗಾನಹಳ್ಳಿ ಕರಿಯಣ್ಣ ಅವರು ಕಾಡುಗೊಲ್ಲರ ಸಂಸ್ಕೃತಿ ಮತ್ತು ಕೃತಿಯ ಸಾಂಸ್ಕೃತಿಕ ಮಹತ್ವದ ಬಗ್ಗೆ ಸಭಿಕರಿಗೆ ವಿವರಿಸಿದರು.
ಈ ವೇದಿಕೆಯಲ್ಲಿ ಕೃತಿಯ ಲೇಖಕ ಡಾ.ಜಿ.ವಿ. ಆನಂದಮೂರ್ತಿ, ತಾಪಂ ಇಒ ಶಶಿಧರ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆತಿಪ್ಪೇಸ್ವಾಮಿ, ದೊಡ್ಡ ಮಲ್ಲಯ್ಯ, ಬೂದಿಹಳ್ಳಿ ರಾಜಣ್ಣ,ಎಂ.ಜಿ.ರಂಗಸ್ವಾಮಿ, ಕರಿಯಪ್ಪ ಮಾಸ್ಟರ್, ತಿಮ್ಮಣ್ಣ ಮಾರಿಕುಂಟೆ, ಶಿವಣ್ಣ ಬೆಳ್ಳಾವಂಡಿ, ಶಿವಲಿಂಗಪ್ಪ ಉಪಸ್ಥಿತರಿದ್ದರು. ಹುಣ್ಣಿಮೆ ಪ್ರಕಾಶಕ ಡಾ.ಎನ್.ಆರ್.ತಿಪ್ಪೇಸ್ವಾಮಿ, ಹಾಗೂ ನಿಸರ್ಗ ಗೋವಿಂದರಾಜು ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಯೋಜಿಸಿದ್ದರು. ಸಮಾರಂಭದಲ್ಲಿ ಅಪಾರ ಸಂಖ್ಯೆಯಲ್ಲಿ ಸಾಹಿತ್ಯಾ ಸಕ್ತರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
`ಕಾಡುಗೊಲ್ಲರ ವಿಶಿಷ್ಠ ಬದುಕನ್ನು ಪರಿಚಯಿಸುವಲ್ಲಿ ಕೃತಿ ಮಹತ್ವದ ಪಾತ್ರ’



