ಗುಂಡ್ಲುಪೇಟೆ: ಸಮಾಜದಲ್ಲಿ ದುಡಿಯುವ ವರ್ಗಕ್ಕೆ ಸಾಮಾಜಿಕ ನ್ಯಾಯ ಸಿಗಬೇಕೆಂದು ಎಂದು ತಾಲ್ಲೂಕು ಕಾನೂನುಗಳ ಸದಸ್ಯ ಕಾರ್ಯದರ್ಶಿಗಳು ಹಾಗೂ ಪ್ರಧಾನ ಸಿವಿಲ್ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಧೀಶರಾದ ಶಿವಕುಮಾರ್ ಜಿ.ಜೆ ಹೇಳಿದರು.
ಪಟ್ಟಣದ ಜಿ.ಟಿ.ಟಿ.ಸಿ ಕಾಲೇಜಿನಲ್ಲಿ ತಾಲ್ಲೂಕುಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಕೈಲಾಶ್ ಸತ್ಯಾರ್ಥಿ ಚಿಲ್ಟನ್ಸ್ ಫೌಂಡೇಶನ್, ಮಹಿಳಾಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ ಹಾಗೂ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರ, ಇವರ ಸಹಯೋಗದಲ್ಲಿ ನಡೆದ ಅಂತರಾಷ್ಟ್ರೀಯ ಸಾಮಾಜಿಕ ನ್ಯಾಯ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿಶ್ವ ಸಂಸ್ಥೆ ಫೆ. 20, 2007 ರಂದು ವಿಶ್ವ ಸಾಮಾಜಿಕ ದಿನವನ್ನಾಗಿ ಆಚರಣೆಗೆ ತಂದಿದ್ದು, ಅಂದಿನಿಂದ ಪ್ರತಿ ವರ್ಷ ಫೆ.20ನ್ನು ದಿನಾಚರಣೆಯನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಜಗತ್ತಿನ ಎಲ್ಲಾ ಶೋಷಿತರು, ಅಸಂಘಟಿತರು, ತುಳಿತಕ್ಕೆ ಒಳಗಾದವರಿಗೆ ಸಮಾಜದಲ್ಲಿ ಸರಿ ಸಮಾನವಾದ ಸ್ಥಾನಮಾನ ಮತ್ತು ಹಕ್ಕುಗಳನ್ನು ನೀಡುವ ಮೂಲಕ ಮುಖ್ಯ ವಾಹಿನಿಗೆ ತರುವ ಕೆಲಸವನ್ನು ಸರ್ಕಾರಗಳು ಮಾಡಬೇಕಾಗಿದೆ ಎಂದರು.
ಆರ್ಥಿಕ ಬಡತನ ಹಾಗೂ ಸಾಮಾಜಿಕ ಅಸಮಾನತೆ ಎಲ್ಲಿಯೇ ಇರಲಿ ಅದು ಅಭಿವೃದ್ಧಿಗೆ ಮಾರಕಎಂಬ ಸತ್ಯದ ಅರಿವಿನ ಪಲವೇ ಈ ದಿನಾಚರಣೆ. ರಾಷ್ಟ್ರದ ಅಭಿವೃದ್ಧಿಗೆ ಸಾಮಾಜಿಕ ನ್ಯಾಯ ಆವಶ್ಯ.ಸಾಮಾಜಿಕ ನ್ಯಾಯವು ರಾಷ್ಟ್ರಗಳ ಒಳಗೆ ಶಾಂತಿಯುತ ಮತ್ತು ಸಮೃದ್ದ ಸಹಬಾಳ್ವೆಗೆ ಆಧಾರವಾಗಿರುವ ತತ್ವವಾಗಿದೆ.
ಗಂಭೀರ ಸಾಮಾಜಿಕ ಸಮಸ್ಯೆಯಾದ ಸಾಮಾಜಿಕ ಅಸಮಾನತೆಯನ್ನು ತೊಡೆದುಹಾಕುವ ಪ್ರಯತ್ನಗಳಿಗೆ ಉತ್ತೇಜನ ನೀಡಿ, ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಆಶಯದಿಂದ ಪ್ರತಿ ವರ್ಷ ಫೆಬ್ರವರಿ 20 ರಂದುಸಾಮಾಜಿಕ ನ್ಯಾಯದ ವಿಶ್ವ ದಿನವನ್ನು ಆಚರಿಸಲಾಗುತ್ತದೆ.
ಆಚರಣೆಯು ಉದ್ಯೋಗ, ಸಾಮಾಜಿಕ ರಕ್ಷಣೆ, ಸಾಮಾಜಿಕ ಸಂವಾದ ಮತ್ತು ಮೂಲಭೂತತತ್ವಗಳು ಮತ್ತು ಕೆಲಸದಲ್ಲಿ ಹಕ್ಕುಗಳ ಮೂಲಕ ಎಲ್ಲರಿಗೂ ನ್ಯಾಯಯುತ ಫಲಿತಾಂಶಗಳನ್ನು ಖಾತರಿಪಡಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ವಕೀಲರ ಸಂಘದ ಕಾರ್ಯದರ್ಶಿ ಪುಟ್ಟಸ್ವಾಮಿ, ಜಿಲ್ಲಾ ಮಕ್ಕಳ ಸಮಿತಿಯ ಅಧ್ಯಕ್ಷರಾದ ಸರಸ್ವತಿ, ಶಿಶು ಯೋಜನಾಧಿಕಾರಿ ರುದ್ರವ್ವ ಮತ್ತು ಜಿ.ಟಿ.ಟಿ.ಸಿ ಕಾಲೇಜಿನ ಪ್ರಾಂಶುಪಾಲ ಅನಿಲ್ ಕುಮಾರ್ ಉಪಸ್ಥಿತರಿದ್ದರು.