ಕೆ.ಆರ್.ನಗರ: ಮುಖ್ಯಮಂತ್ರಿ ಮತ್ತು ಉಪ-ಮುಖ್ಯಮಂತ್ರಿಗಳ ರಾಜಕೀಯ ಹೊಡೆದಾಟದ ನಡುವೆ ಲೋಕಸಭೆ ಚುನಾವಣೆ ನಂತರ ರಾಜ್ಯ ಸರ್ಕಾರ ಅಸ್ತಿತ್ವದಲ್ಲಿ ಇರುವುದೇ ಅನುಮಾನ ಎಂದು ಮಾಜಿ ಮುಖ್ಯಮಂತ್ರಿಗಳು ಆದ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ನಗರದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಮುಖಂಡರ ಸಭೆಯಲ್ಲಿ ಮಾತನಾಡಿ, ಉಪ-ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದಿನಬೆಳಗಾದರೆ ಮುಂದಿನ ಮುಖ್ಯಮಂತ್ರಿ ನಾನೇ ಎಂದು ಹೇಳುತ್ತಾರೆ ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಯತೀಂದ್ರಸಿದ್ದರಾಮಯ್ಯ ಮುಂದಿನ ನಾಲ್ಕು ವರ್ಷಗಳ ಅವಧಿಗೆ ನಮ್ಮ ತಂದೆಯೇ ಮುಖ್ಯಮಂತ್ರಿಗಳಾಗಿರುತ್ತಾರೆ ಎಂದು ಹೇಳಿಕೆ ನೀಡುತ್ತಾರೆ ಇದರಲ್ಲಿ ಜನರು ಯಾವುದನ್ನು ನಂಬಬೇಕು ಎಂದರು.
ಕಾಂಗ್ರೆಸ್ ಸರ್ಕಾರ ತಮಗೆ ಮತ ನೀಡಿದ ರಾಜ್ಯದ ಜನರನ್ನು ತೀವ್ರ ಸಂಕಷ್ಟಕ್ಕೆ ದೂಡಿದ್ದು ಅಭಿವೃದ್ದಿ ವಿರೋಧಿ ನೀತಿ ಅನುಸರಿಸುತ್ತಿದ್ದು ಪಂಚ ಗ್ಯಾರಂಟಿ ನೀಡುವ ನೆಪದಲ್ಲಿ ಒಂದು ವರ್ಷದಲ್ಲಿಯೇ 1.50 ಲಕ್ಷ ಕೋಟಿ ಸಾಲ ಮಾಡಿದ್ದು, ಇದರ ಜತೆಗೆ ರೈತರ ಬೆಳೆ ಹಾಳಾಗಿ 38 ಸಾವಿರ ಕೋಟಿ ನಷ್ಟವಾಗಿದ್ದರೂ 650 ಕೋಟಿ ಪರಿಹಾರ ನೀಡುತ್ತಿದ್ದು ಇದರಲ್ಲಿ ಕೇಂದ್ರದ ಪಾಲು 450 ಕೋಟಿಯಿದೆ ಎಂದು ತಿಳಿಸಿದರು.
ರಾಜ್ಯಕ್ಕೆ ಅನುದಾನ ನೀಡುವ ವಿಚಾರದಲ್ಲಿ ಕೇಂದ್ರದಿಂದ ಯಾವುದೇ ಅನ್ಯಾಯವಾಗಿಲ್ಲ ನಷ್ಟಕ್ಕೊಳಗಾದ ರೈತರು ಮತ್ತು ನೊಂದವರಿಗೆ ಪರಿಹಾರ ನೀಡಲು ಯೋಗ್ಯತೆಯಿಲ್ಲದೆ ದಿನಬೆಳಗಾದರೆ ಪ್ರಧಾನ ಮಂತ್ರಿಗಳನ್ನು ದೂರುವ ಮುಖ್ಯಮಂತ್ರಿ ಮತ್ತು ಅವರ ಸಂಪುಟದ ಸಚಿವರು ಸತ್ಯವನ್ನು ಮರೆಮಾಚುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಬರಗಾಲವನ್ನು ಜೊತೆಯಲ್ಲಿಯೇ ಕರೆದುಕೊಂಡು ಬರುತ್ತದೆ ಆದರೆ ನಾನು ಮತ್ತು ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಗಳಾದ ಅವಧಿಯಲ್ಲಿ ಉತ್ತಮ ಮಳೆಯಾಗಿ ಕೆರೆ ಕಟ್ಟೆಗಳು ತುಂಬಿ ರೈತರ ಬದುಕು ಹಸನಾಗಿತ್ತು ಮತ್ತೆ ಅಂತಹಾ ಕಾಲ ಬರಬೇಕಾದರೆ ನಮ್ಮನ್ನು ಬೆಂಬಲಿಸಿ ಎಂದು ಕೋರಿದರು.
ಪಂಚ ಗ್ಯಾರಂಟಿ ಹೆಸರಿನಲ್ಲಿ ಮಹಿಳೆಯರಿಗೆ 2 ಸಾವಿರ ರೂ ನೀಡುತ್ತಿರುವ ಸರ್ಕಾರ ಮನೆಯ ಯಜಮಾನನಿಂದ ಮಧ್ಯದ ಮೂಲಕ ದುಪ್ಪಟ್ಟು ಹಣ ವಸೂಲಿ ಮಾಡುವುದರ ಜತೆಗೆ ನೊಂದಣಿ ಶುಲ್ಕ, ವಿದ್ಯುತ್ ದರ ಮತ್ತಿತ್ತರ ಅಗತ್ಯ ವಸ್ತುಗಳ ಬೆಲೆ ಏರಿಸಿ ಹಗಲು ದರೋಡೆ ಮಾಡುತ್ತಿದೆ ಎಂದು ಟೀಕಿಸಿದರಲ್ಲದೆ ಮೊಸಳೆ ಕಣ್ಣೀರು ಸುರಿಸುವ ಕಾಂಗ್ರೆಸ್ ನಾಯಕರನ್ನು ನಂಬಬೇಡಿ ಎಂದು ನುಡಿದರು.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಮನೆ ಬಾಗಿಲಿಗೆ ಬಂದು ವಿಷದ ಬಾಟಲಿ ಹಿಡಿದು ಕೈ ಕಾಲು ಹಿಡಿದವರನ್ನು ಗೆಲ್ಲಿಸಿ ಮೂರು ಸಾರಿ ಆಯ್ಕೆಯಾಗಿ ಜನಸೇವೆಗೆ ತನ್ನ ಜೀವನವನ್ನೇ ಮುಡುಪಾಗಿಟ್ಟಿದ್ದ ಸಾ.ರಾ.ಮಹೇಶ್ರವರನ್ನು ಸೋಲಿಸಿದ್ದೀರಿ ಆದರೆ ಈಗ ಗೆದ್ದವರು ಯಾವ ಅಭಿವೃದ್ದಿ ಕೆಲಸ ಮಾಡುತ್ತಿದ್ದಾರೆ ಎಂದು ಮೂದಲಿಸಿದರು.