ಬೆಂಗಳೂರು: ‘ಮೊಹಮ್ಮದ್ ಶಮಿ ಅದ್ಭುತ ಬೌಲರ್ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು. ನ್ಯೂಜಿಲೆಂಡ್ ಎದುರು ಅವರು ಏಳು ವಿಕೆಟ್ ಪಡೆದ ಇನಿಂಗ್ಸ್ ಅಂತೂ ಅತ್ಯದ್ಭುತ. ಅದನ್ನು ನಾನು ಕಣ್ಣಾರೆ ಕಂಡು ಚಕಿತನಾದೆ. ಅವರಷ್ಟು ಚೆನ್ನಾಗಿ ಚೆಂಡಿನ ಸೀಮ್ ಅನ್ನು ಪ್ರಯೋಗಿಸುವ ಮತ್ತೊಬ್ಬ ಬೌಲರ್ ಇಲ್ಲ.
ಭಾರತ ತಂಡದ ವೇಗದ ಬೌಲಿಂಗ್ನ ಪ್ರಮುಖ ಶಕ್ತಿ ಅವರು….’- ವೆಸ್ಟ್ ಇಂಡೀಸ್ ಕ್ರಿಕೆಟ್ ದಿಗ್ಗಜ ವಿವಿಯನ್ ರಿಚರ್ಡ್ಸ್ ಅವರು ಭಾರತ ಕ್ರಿಕೆಟ್ ತಂಡದ ವೇಗಿ ಶಮಿಯ ಬಗ್ಗೆ ಆಡಿದ ಮೆಚ್ಚುಗೆಯ ಮಾತುಗಳಿವು. ಮುಂಬೈನಲ್ಲಿ ಈಚೆಗೆ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಪಂದ್ಯವನ್ನು ವೀಕ್ಷಿಸಿದ 71 ವರ್ಷದ ರಿಚರ್ಡ್ಸ್ ಶುಕ್ರವಾರ ಬೆಂಗಳೂರಿಗೆ ಬಂದಿದ್ದರು. ವರ್ಚಸ್ ಸ್ಪಿರಿಟ್ಸ್ ಪ್ರಚಾರ ರಾಯಭಾರಿಯಾಗಿ ನೇಮಕವಾಗಿರುವ ಅವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದರು.
‘ಮುಂದಿನ ವರ್ಷ ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ಟಿ20 ವಿಶ್ವಕಪ್ ನಡೆಯ ಲಿರುವುದು ಸ್ವಾಗತಾರ್ಹ. ಸದ್ಯದ ಏಕದಿನ ವಿಶ್ವಕಪ್ ಟೂರ್ನಿಯ ವಿಜೃಂಭ ಣೆಯನ್ನು ನೋಡಿ ವಿಂಡೀಸ್ನಲ್ಲಿ ಅಸೂಯೆ ಹುಟ್ಟಿರಬಹುದು. ಆದ್ದರಿಂದ ಮುಂದಿನ ಬಾರಿ ಭಾರತಕ್ಕೆ ಪೈಪೋಟಿ ನೀಡಿ ಉತ್ತಮವಾಗಿ ಆಯೋಜಿಸುವ ನಿರೀಕ್ಷೆ ಇದೆ. ಅಲ್ಲದೇ ವಿಂಡೀಸ್ ಬೆಳವಣಿಗೆಗೂ ಇದು ಮುನ್ನುಡಿಯಾಗಬಹುದು’ ಎಂದರು ಭಾನುವಾರ ನಡೆಯಲಿರುವ ವಿಶ್ವಕಪ್ ಫೈನಲ್ನಲ್ಲಿ ಭಾರತದ ಜಯದ ಸಾಧ್ಯತೆ ಹೆಚ್ಚಿದೆ ಎಂದೂ ಅವರು ಅಭಿಪ್ರಾಯಪಟ್ಟರು.