This is the title of the web page
This is the title of the web page

ರಾಹುಲ್ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ: ಖರ್ಗೆ

ಬೆಂಗಳೂರು: ರಾಹುಲ್ ಗಾಂಧಿಯವರು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ, ರಾಹುಲ್ ಗಾಂಧಿಯವರು ಪ್ರಜಾಪ್ರಭುತ್ವದ ಬಗ್ಗೆ ಮಾತ್ರ ಮಾತನಾಡಿದ್ದಾರೆ. ವಿಷಯ ಮಂಡನೆ ಮಾಡುವಾಗ ಜನರು ತಮ್ಮ ಅಭಿಪ್ರಾಯ ಹೇಳುತ್ತಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಇಂಗ್ಲೆಂಡಿನಲ್ಲಿ ಸಾರ್ವಜನಿಕ ಭಾಷಣ ಮಾಡುವಾಗ ರಾಹುಲ್ ಗಾಂಧಿಯವರು ಭಾರತ ದೇಶದ ಬಗ್ಗೆ ಅವಹೇಳನ ಮಾಡಿದ್ದಾರೆ, ದೇಶಕ್ಕೆ ಅಪಮಾನ ಮಾಡಿದ್ದಾರೆ, ದೇಶದ ಮುಂದೆ ಅವರು ಕ್ಷಮೆಯಾಚಿಸಬೇಕು ಎಂದು ಆಡಳಿತ ಪಕ್ಷದ ಸದಸ್ಯರು ಒತ್ತಾಯಿಸುತ್ತಿರುವ ಕುರಿತಂತೆ ಅಭಿಪ್ರಾಯ ಕೇಳಿದಾಗ… ಸುದ್ದಿಸಂಸ್ಥೆಯೊಂದಕ್ಕೆ ಮಲ್ಲಿಕಾರ್ಜುನ ಖರ್ಗೆ ಹೀಗೆ ಹೇಳಿದ್ದಾರೆ. ರಾಹುಲ್ ಗಾಂಧಿಯವರು ಕ್ಷಮೆ ಕೇಳಬೇಕು ಎಂದು ಒತ್ತಾಯಿಸುತ್ತಿರುವವರಲ್ಲಿ ನಾನು ಒಂದು ಮಾತು ಕೇಳುತ್ತೇನೆ, ಪ್ರಧಾನಿ ಮೋದಿಯವರು 5-6 ದೇಶಗಳಿಗೆ ಹೋಗಿ ಅಲ್ಲಿ ಮಾತನಾಡುವಾಗ ನಮ್ಮ ದೇಶದ ಜನರನ್ನು ಅವಮಾನಿಸಿದ್ದಾರೆ.

ಭಾರತದಲ್ಲಿ ಹುಟ್ಟುವುದು ಪಾಪ, ಅಪರಾಧ ಎಂದು ಹೇಳಿದ್ದಾರೆ. ಹಾಗಿದ್ದರೆ ಅವರು ಮಾಡಿದ್ದು ಅಪಮಾನವಲ್ಲವೇ, ಅವರೇಕೆ ಕ್ಷಮೆ ಕೇಳಲಿಲ್ಲ ಎಂದು ಪ್ರಶ್ನಿಸಿದರು. ರಾಹುಲ್ ಗಾಂಧಿಯವರ ಮಾತುಗಳನ್ನು ಆಕ್ಷೇಪಿಸುವ ಮೂಲಕ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಗಳನ್ನು ದುರ್ಬಲಗೊಳಿಸಲಾಗುತ್ತಿದೆ. ಸತ್ಯ ಮಾತನಾಡುವವರನ್ನು ಜೈಲಿಗೆ ಕಳುಹಿಸಲಾಗುತ್ತದೆ.

ಇಂತಹ ವಾತಾವರಣ ಪ್ರಜಾಪ್ರಭುತ್ವಕ್ಕೆ ಮಾರಕವಲ್ಲವೇ ಎಂದು ಕೇಳಿದರು. ಹೀಗಾಗಿ ರಾಹುಲ್ ಗಾಂಧಿಯವರು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ, ಪ್ರಧಾನ ಮಂತ್ರಿಗಳು ಅನೇಕ ದೇಶಗಳಿಗೆ ಹೋಗಿ ಇಲ್ಲಿನ ಜನರ ಸಂಸ್ಕೃತಿ ಮತ್ತು ಮಾನವೀಯತೆಯನ್ನು ಅವಮಾನಿಸಿದ್ದೀರಿ ಎಂದು ನಾವು ಹೇಳುತ್ತೇವೆ. ರಾಹುಲ್ ಗಾಂಧಿ ಕೇವಲ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡಿದ್ದಾರೆ. ಜನರು ಚರ್ಚೆಗೆ ಹೋದಾಗ, ಅವರು ತಮ್ಮ ಅಭಿಪ್ರಾಯಗಳನ್ನು ಮಂಡಿಸುವುದು ಸಹಜ ಎಂದರು.