ಬೆಂಗಳೂರು: ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಮಾಸಾಂತ್ಯದಲ್ಲಿ ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆಗೆ ಯಾವುದೇ ನಿರ್ಬಂಧ ವಿಧಿಸಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.ಇಂದು ಬೆಳಿಗ್ಗೆ ಕೊರೊನಾ ಸಂಬಂಧ ಕೇಂದ್ರ ಆರೋಗ್ಯ ಸಚಿವ ಮುನ್ಸುಖ್ ಮಾಂಡವೀಯ ಅವರು ನಡೆಸಿದ ಎಲ್ಲಾ ರಾಜ್ಯಗಳ ಆರೋಗ್ಯ ಸಚಿವರ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಪಾಲ್ಗೊಂಡು ಸಭೆಯ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಹೊಸ ವರ್ಷಾಚರಣೆ ಹಾಗೂ ಕ್ರಿಸ್ಮಸ್ಗೆ ಸಂಬಂಧಪಟ್ಟಂತೆ ಆಚರಣೆ ಮಾಡಲು ಯಾವುದೇ ಮಾರ್ಗಸೂಚಿ ಹೊರಡಿಸಿಲ್ಲ ಎಂದಿದ್ದಾರೆ.
ಕೊರೊನಾ ವೈರಸ್ನ ಜೆಎನ್ 1 ಉಪ ತಳಿಯ ಒಟ್ಟು 20 ಸೋಂಕು ಪ್ರಕರಣಗಳು ದೇಶದಲ್ಲಿ ಪತ್ತೆಯಾಗಿವೆ. ಕರ್ನಾಟಕದಲ್ಲಿ ಕೋವಿಡ್ ಸೋಂಕಿನಿಂದಾಗಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ನಿನ್ನೆ ಕೊರೊನಾ ವೈರಸ್ ಸೋಂಕಿಗೆ 64 ವರ್ಷದ ವೃದ್ಧ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಪಡೆದಿದೆ. ಎಓ.1 ವೈರಸ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಡಿದೆ. ದೇಶದಲ್ಲಿ 20 ಎಓ.1 ಪ್ರಕರಣಗಳು ಪತ್ತೆಯಾಗಿವೆ.
ಗೋವಾದಲ್ಲಿ 18, ಮಹಾರಾಷ್ಟ್ರದಲ್ಲಿ 1, ಕೇರಳದಲ್ಲಿ 1 ಕೇಸ್ ಪತ್ತೆಯಾಗಿದೆ ಎಂದು ಗುಂಡೂರಾವ್ ಮಾಹಿತಿ ನೀಡಿದರು.
ನಾಳೆ ಕೊರೊನಾ ಮಾರ್ಗಸೂಚಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಆರ್ಟಿಪಿಎಸ್ಆರ್ ಸಂಬಂಧ ದರನಿಗಧಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದಿದ್ದಾರೆ.ಕೊರೊನಾ ಮತ್ತು ಜೆಎನ್ 1 ಬಗ್ಗೆ ಯಾವುದೇ ಆತಂಕ ಬೇಡ, ಎಚ್ಚರ ವಹಿಸುವಂತೆ ಜನತೆಗೆ ಸಲಹೆ ಮಾಡಿದ್ದಾರೆ.