ಬೆಂಗಳೂರು: ಕೊಲ್ಲಿ ರಾಷ್ಟಗಳ ಯುದ್ಧದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎಲ್ಪಿಜಿ ಪೂರೈಕೆಯಲ್ಲಿ ವ್ಯತ್ಯಯವಾಗಬಹುದು ಎಂಬ ಆತಂಕ ಸಾರ್ವಜನಿಕರಲ್ಲಿ ಮನೆ ಮಾಡಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ರಾಜ್ಯದಲ್ಲಿ ಅಡುಗೆ ಅನಿಲದ ಯಾವುದೇ ಕೊರತೆಯಿಲ್ಲ ಮತ್ತು ಸಾರ್ವಜನಿಕರು ಗಾಬರಿಯಿಂದ ಅನಗತ್ಯ ಬುಕಿಂಗ್ ಮಾಡಬಾರದು ಎಂದು ಮನವಿ ಮಾಡಿದೆ.
ತೈಲ ಕಂಪನಿಗಳಾದ ಐಒಸಿ, ಬಿಪಿಸಿ ಮತ್ತು ಹೆಚ್ಪಿಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿರುವ ಸರ್ಕಾರ, ರಾಜ್ಯಕ್ಕೆ ಅಗತ್ಯವಿರುವಷ್ಟು ಎಲ್ಪಿಜಿ ದಾಸ್ತಾನು ಲಭ್ಯವಿರುವುದನ್ನು ಖಚಿತಪಡಿಸಿಕೊಂಡಿದೆ.
ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಯಾಗದಂತೆ ತಡೆಯಲು ಗ್ರಾಹಕರು ತುರ್ತು ಮತ್ತು ಅನಗತ್ಯವಾಗಿ ಸಿಲಿಂಡರ್ಗಳನ್ನು ಬುಕ್ ಮಾಡಬಾರದು.
ಸರ್ಕಾರಿ ಆಸ್ಪತ್ರೆಗಳು, ಹಾಸ್ಟೆಲ್ಗಳು, ಅಂಗನವಾಡಿಗಳು, ಶಾಲೆ-ಕಾಲೇಜುಗಳು ಮತ್ತು ಕಾರಾಗೃಹಗಳಿಗೆ ಯಾವುದೇ ಅಡಚಣೆಯಿಲ್ಲದೆ ಗ್ಯಾಸ್ ಸರಬರಾಜು ಮಾಡುವಂತೆ ತೈಲ ಕಂಪನಿಗಳಿಗೆ ಸೂಚಿಸಲಾಗಿದೆ.
ಗ್ಯಾಸ್ ಸಿಲಿಂಡರ್ಗಳನ್ನು ಅನಧಿಕೃತವಾಗಿ ಸಂಗ್ರಹಿಸುವುದು, ಸಾಗಿಸುವುದು ಅಥವಾ ಅಕ್ರಮವಾಗಿ ರೀಫಿಲ್ಲಿಂಗ್ ಮಾಡುವುದು ಕಂಡುಬAದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಇಂತಹ ಪ್ರಕರಣಗಳಲ್ಲಿ `ಅಗತ್ಯ ವಸ್ತುಗಳ ಕಾಯ್ದೆ ೧೯೫೫’ ಮತ್ತು `ಎಲ್ಪಿಜಿ ನಿಯಂತ್ರಣ ಆದೇಶ ೨೦೦೦’ ಅಡಿಯಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಕಳ್ಳಸಂತೆಯಲ್ಲಿ ಸಿಲಿಂಡರ್ ಮಾರಾಟ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸುವಂತೆ ಜಿಲ್ಲಾಡಳಿತಗಳಿಗೆ ನಿರ್ದೇಶನ ನೀಡಲಾಗಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



