ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ಗೆ ಯಾವುದೇ ನಿರ್ದಿಷ್ಟ ಉಗ್ರ ಸಂಘಟನೆಯ ಬೆದರಿಕೆ ಬಂದಿಲ್ಲ. ಆಯೋಜಕರು ನಿಗದಿಯಂತೆ ಉದ್ಘಾಟನಾ ಸಮಾರಂಭವನ್ನು ಸೀನ್ ನದಿಯಲ್ಲಿ ನಡೆಸಲು ಯೋಜನೆ ಹಾಕಿಕೊಂಡಿದ್ದಾರೆ ಎಂದು ಕ್ರೀಡಾ ಸಚಿವರು ಬುಧವಾರ ಹೇಳಿದ್ದಾರೆ.
ಕಳೆದ ತಿಂಗಳು ಮಾಸ್ಕೋ ಸಂಗೀತ ಸಭಾಂಗಣದ ಮೇಲೆ ನಡೆದ ದಾಳಿಯಲ್ಲಿ 140 ಜನರು ಸಾವನ್ನಪ್ಪಿದ್ದು, ಜುಲೈ 26 ರಿಂದ ಪ್ರಾರಂಭವಾಗುವ ಪ್ಯಾರಿಸ್ ಕ್ರೀಡಾಕೂಟದ ಮೇಲೆಯೂ ಆತಂಕ ಮೂಡಿಸಿದೆ.‘ಇದುವರೆಗೆ ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಕೂಟಗಳನ್ನು ಗುರಿಯಾಗಿಸಿಕೊಂಡು ಯಾವುದೇ ನಿರ್ದಿಷ್ಟ ಭಯೋತ್ಪಾದನೆ ಸಂಬಂಧಿತ ಬೆದರಿಕೆ ಬಂದಿಲ್ಲ’ ಎಂದು ಕ್ರೀಡಾ ಸಚಿವೆ ಅಮೇಲಿ ಔಡಿಯಾ-ಕ್ಯಾಸ್ಟೆರಾ ಅವರು ಫ್ರಾನ್ಸ್ 2 ಚಾನೆಲ್ಗೆ ತಿಳಿಸಿದರು.
ಸೀನ್ನಲ್ಲಿನ ಉದ್ಘಾಟನಾ ಸಮಾರಂಭ ನಡೆಸುವುದು ನಮ್ಮ ಮೂಲ ಯೋಜನೆ. ಆದರೆ ಒಂದು ವೇಳೆ ಕೈಗೂಡದಿದ್ದಲ್ಲಿ ಪರ್ಯಾಯವಾಗಿ ಸಮಾರಂಭ ನಡೆಸಲು ತೆರೆಮರೆಯಲ್ಲಿ ತಯಾರಿ ನಡೆಸಲಾಗುತ್ತಿದೆ ಎಂದರು.ಕ್ರೀಡೆಗಳ ಆರಂಭಕ್ಕೂ ಮುನ್ನ, ಅಥ್ಲೀಟ್ಗಳು ಕ್ರೀಡಾಂಗಣದಲ್ಲಿ ಪಥ ಸಂಚಲನ ನಡೆಸುವುದು ಸಂಪ್ರದಾಯ. ಈ ಬಾರಿ ಸ್ಪರ್ಧಾಳುಗಳು ಚಿಕ್ಕ ದೋಣಿಗಳ ಮೂಲಕ ಸಾಗುವರು. 5 ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರು ಹಾಗೂ ಅಕ್ಕಪಕ್ಕದ ಕಟ್ಟಡಗಳಿಂದ ವೀಕ್ಷಿಸುವವರು ಈ ನೌಕಾಯಾನ ಸಾಹಸಕ್ಕೆ ಸಾಕ್ಷಿಯಾಗಲಿದ್ದಾರೆ.