ಬೆಂಗಳೂರು : ಆಹ್ವಾನ ಪತ್ರಿಕೆ ಕೊಡುವ ನೆಪದಲ್ಲಿ ಮನೆಗೆ ನುಗ್ಗಿ ಮಹಿಳೆಯ ಕೈಕಾಲು ಕಟ್ಟಿಹಾಕಿ ಚಿನ್ನಾಭರಣಗಳನ್ನು ಕಳ್ಳತನ ಮಾಡಿರುವ ದುರ್ಘಟನೆ ಆನೇಕಲ್ ತಾಲೂಕಿನ ನೆರಳೂರು ಗ್ರಾಮದಲ್ಲಿ ನಡೆದಿದೆ. ನೆರಳೂರು ಗ್ರಾಮದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರವಿಕುಮಾರ್ ಅವರು ಎಂದಿನAತೆ ನಿನ್ನೆ ಕೆಲಸಕ್ಕೆ ಹೋಗಿದ್ದಾಗ ಮನೆಯಲ್ಲಿ ಅವರ ಪತ್ನಿ ನಾಗವೇಣಿ ಒಬ್ಬರೇ ಇದ್ದರು. ಇದನ್ನು ಗಮನಿಸಿದ ಖತರ್ನಾಕ್ ಜೋಡಿ ಅಮಂತ್ರಣ ಪತ್ರಿಕೆ ಕೊಡುವ ನೆಪದಲ್ಲಿ ಮನೆ ಒಳಗೆ ಬಂದು ಕುಡಿಯಲು ನೀರು ಕೇಳಿದ್ದಾರೆ. ನೀರು ತರಲೆಂದು ಅಡುಗೆ ಮನೆಗೆ ಹೋದ ನಾಗವೇಣಿಯನ್ನು ಹಿಂಬಾಲಿಸಿದ ಪುರುಷ ಬೆದರಿಸಿ ಕೈಕಾಲು ಕಟ್ಟಿ ಹಾಕಿ ಕೂಡಿ ಹಾಕಿದ್ದಾರೆ.
ನಂತರ ಚಾಕು ಕತ್ತಿನ ಬಳಿ ಇಟ್ಟು ಬೀರುವಿನ ಲಾಕರ್ ಕೀ ಪಡೆದು ಸುಮಾರು ೨೦೦ ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ, ಸ್ವಲ್ಪ ಬಳಿಕ ಭಯದಿಂದ ಹೊರಬಂದ ನಾಗವೇಣಿ ಸ್ನೇಹಿತರಿಗೆ ಕರೆ ಮಾಡಿ ತಿಳಿಸಿದಾಗ ಕೂಡಲೇ ಅತ್ತಿಬೆಲೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಗ್ರಾಮಾಂತರ ಎಸ್ಪಿ ಸಿ ಕೆ ಬಾಬಾ ಮತ್ತು ಅಡಿಷನಲ್ ಎಸ್ಪಿ ವೆಂಕಟೇಶ್ ಪ್ರಸನ್ನ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.



